ಬೆಂಗಳೂರಿನ ವಿವಿಧೆಡೆ ಪಟಾಕಿ ಅನಾಹುತ: ಮಕ್ಕಳು ಸೇರಿ 39ಕ್ಕೂ ಅಧಿಕ ಮಂದಿಗೆ ಗಾಯ

ಬೆಂಗಳೂರು, ಅ.28: ದೀಪಾವಳಿಯ ಪಟಾಕಿ ಸಿಡಿಸುವ ವೇಳೆ ವಿವಿಧೆಡೆ ಸಂಭವಿಸಿದ ಅವಘಡದಲ್ಲಿ ಮಕ್ಕಳು ಸೇರಿ 39ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ನಗರದ ಹಲವೆಡೆ ನಡೆದಿವೆ.
ಚಾಮರಾಜಪೇಟೆಯ ಅಝಾದ್ ನಗರದ ಮದನ್(14), ತನುಶ್ರೀ(15), ಅಶೋಕನಗರ ಮಾಲಿನಿ(52) ಹಾಗೂ ಹರ್ಷಿತ್(6), ಮೈಸೂರು ರಸ್ತೆಯ ಫಿರೋಝ್ ಖಾನ್(9) ಸೇರಿದಂತೆ 39ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಅಲ್ಲದೆ 15 ವರ್ಷದೊಳಗಿನ ಹೆಚ್ಚಿನ ಮಕ್ಕಳ ಕಣ್ಣುಗಳಿಗೆ ಗಾಯಗಳಾಗಿವೆ.
ರವಿವಾರ ಪಟಾಕಿ ಸಿಡಿದು 8 ಮಂದಿಯ ಕಣ್ಣಿಗೆ ಹಾನಿಯಾಗಿದ್ದು, ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಸೋಮವಾರ 10ಕ್ಕೂ ಅಧಿಕ ಮಂದಿಯ ಕಣ್ಣಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಸ್ಪತ್ರೆಗೆ ದಾಖಲಾದ 25 ಮಂದಿಗೆ ಚಿಕಿತ್ಸೆ ನೀಡಲಾಗಿದ್ದು, ಅವರಲ್ಲಿ ಇಬ್ಬರ ಕಣ್ಣಿನ ರೆಟಿನಾಗೆ ಹಾನಿಯಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಯಶವಂತಪುರ ಹಾಗೂ ಬನ್ನೇರುಘಟ್ಟ, ನಾರಾಯಣ ನೇತ್ರಾಲಯಗಳಲ್ಲಿ 10ಕ್ಕೂ ಹೆಚ್ಚುಮಂದಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದಾರೆ ಎಂದು ತಿಳಿದುಬಂದಿದೆ