ಕುಮಾರಸ್ವಾಮಿ ಹೇಳಿಕೆಗಳಿಗೆ ಪ್ರತಿಕ್ರಿಯಿಸಲ್ಲ: ದಿನೇಶ್ ಗುಂಡೂರಾವ್

ಬೆಂಗಳೂರು, ಅ.28: ಕುಮಾರಸ್ವಾಮಿ ಹೇಳಿಕೆಗಳಿಗೆ ನಾನು ಪ್ರತಿಕ್ರಿಯಿಸಲು ಹೋಗುವುದಿಲ್ಲ. ಒಂದೊಂದು ಬಾರಿ ಅವರು ಒಂದೊಂದು ರೀತಿ ಮಾತನಾಡುತ್ತಾರೆ. ಆದರೆ, ಸರಕಾರ ಜನಪರ ಕೆಲಸ ಮಾಡುತ್ತಿದ್ದೆಯೇ ಅನ್ನೋದಷ್ಟೇ ನಮಗೆ ಮುಖ್ಯ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಸೋಮವಾರ ನಗರದ ಕ್ವೀನ್ಸ್‌ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಕರೆಯಲಾಗಿದ್ದ ಕಾಂಗ್ರೆಸ್ ರಾಜ್ಯಸಭಾ ಸದಸ್ಯರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಕಾಂಗ್ರೆಸ್ ಸರಕಾರ ಮಾಡಿದ ಕೆಲಸಗಳನ್ನು ಇಂದಿಗೂ ಜನ ನೆನಪಿಸಿಕೊಳ್ಳುತ್ತಿದ್ದಾರೆ ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಆಪ್ತರೊಂದಿಗೆ ಮಾತನಾಡುತ್ತಿರುವ ವಿಡಿಯೋ ವೈರಲ್ ಆಗಿರುವ ಕುರಿತು ಪ್ರತಿಕ್ರಿಯಿಸಿದ ಅವರು, ವಿಡಿಯೋದಲ್ಲಿರುವ ಮಾತುಕತೆ ಜೊತೆಗೆ ಈ ವಿಡಿಯೋವನ್ನು ಯಾರು ಚಿತ್ರೀಕರಣ ಮಾಡಿದ್ದಾರೆ ಅನ್ನೋದು ಕೂಡ ಮುಖ್ಯ ಎಂದರು.
ಸಿದ್ದರಾಮಯ್ಯ ನಮ್ಮ ಪಕ್ಷದ ಪ್ರಭಾವಿ ಮುಖಂಡ. ಅದೇ ರೀತಿ, ಡಿ.ಕೆ.ಶಿವಕುಮಾರ್ ಅವರು ಕೂಡ ನಮ್ಮ ಪಕ್ಷದ ಮುಖಂಡರು. ಕಾಂಗ್ರೆಸ್ ನಾಯಕರ ನಡುವೆ ಪರಸ್ಪರ ಭಿನ್ನಾಭಿಪ್ರಾಯ ಮೂಡುವಂತೆ ಮಾಡಲು ಇಂತಹ ಕೆಲಸಗಳು ನಡೆಯುತ್ತಿರುತ್ತವೆ. ಆದರೂ, ಎಲ್ಲ ನಾಯಕರು ಒಗ್ಗಟ್ಟಾಗಿ ಹೋಗೋದಕ್ಕೆ ತೀರ್ಮಾನ ಮಾಡಿದ್ದೇವೆ ಎಂದು ಅವರು ಹೇಳಿದರು.
ಆಂತರಿಕ ಚರ್ಚೆಗಳು, ಆಂತರಿಕವಾಗಿಯೇ ಇರಬೇಕು. ಅದು ರಾಜಕೀಯ ಲೆಕ್ಕಾಚಾರಗಳು. ಮಾಧ್ಯಮಗಳಲ್ಲಿ ಜಾತಿ ಲೆಕ್ಕಾಚಾರಗಳ ಬಗ್ಗೆ ಚರ್ಚೆ ಆಗಲ್ವಾ? ಹಾಗೆಯೇ ರಾಜಕಾರಣದಲ್ಲಿಯೂ ಜಾತಿಯ ಲೆಕ್ಕಾಚಾರ ಇರುತ್ತೆ. ಇದರ ಬಗ್ಗೆಯೇ ಸಿದ್ದರಾಮಯ್ಯ ತಮ್ಮ ಆಪ್ತರ ಜೊತೆ ಚರ್ಚೆ ಮಾಡಿದ್ದಾರೆ. ಅದರಲ್ಲಿ ತಪ್ಪೇನಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.
ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್ ಮಾತನಾಡಿ, ಎರಡು ತಿಂಗಳ ಬಳಿಕ ಡಿ.ಕೆ.ಶಿವಕುಮಾರ್ ಹೊಸದಿಲ್ಲಿಯ ತಿಹಾರ್ ಜೈಲಿನಿಂದ ಹೊರ ಬಂದಿದ್ದಾರೆ. ಆಗ ಅಲ್ಲಿಗೆ ಬಂದಿದ್ದವರು ಮಾನವೀಯತೆ ದೃಷ್ಟಿಯಿಂದ ಜೆಡಿಎಸ್ ಬಾವುಟವನ್ನು ನೀಡಿದ್ದಾರೆ. ಇದನ್ನು ಬೇರೆ ರೀತಿ ವ್ಯಾಖ್ಯಾನ ಮಾಡುವುದು ಸರಿಯಲ್ಲ ಎಂದರು.
ಎಲ್ಲವನ್ನು ರಾಜಕೀಯಕ್ಕೆ ಉಪಯೋಗಿಸಿಕೊಳ್ಳಬಾರದು. ಕುಮಾರಸ್ವಾಮಿ ಅವರು ಕೂಡ ವಿಮಾನ ನಿಲ್ದಾಣದಲ್ಲಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿದ್ದರು. ಹಾಗಂತ, ಬೇರೆ ಪಕ್ಷದವರು ಬಂದು ಭೇಟಿ ಮಾಡಬಾರದು ಅಂತ ಏನು ಇಲ್ಲವಲ್ಲ. ಜಾತಿ ಪಕ್ಷ ಭೇದ ಮರೆತು ಶಿವಕುಮಾರ್ ಅವರನ್ನು ಮಾಡಿರುವ ಭೇಟಿ ಅದು. ಅದನ್ನು ಬೇರೆ ರೀತಿಯಲ್ಲಿ ಅವಲೋಕನ ಮಾಡುವುದು ತಪ್ಪು ಎಂದು ಅವರು ಹೇಳಿದರು.







