ಹೈಕೋರ್ಟ್ ಆದೇಶದಿಂದ ಎಚ್ಚೆತ್ತ ಸರಕಾರ: ಆರು ತಿಂಗಳಲ್ಲಿ ಸ್ಮಶಾನ ಭೂಮಿ ಒದಗಿಸಲು ಡಿಸಿಗಳಿಗೆ ಆದೇಶ
ಬೆಂಗಳೂರು, ಅ.28: ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಹೈಕೋರ್ಟ್ ಆದೇಶ ನೀಡಿದರೂ ಶವಸಂಸ್ಕಾರಕ್ಕೆ ಸರಕಾರಿ ಜಾಗ ಸಿಗುತ್ತಿಲ್ಲ ಎಂದು ಹೇಳುತ್ತಿದ್ದ, ರಾಜ್ಯ ಸರಕಾರ ಕೊನೆಗೂ ಎಚ್ಚೆತ್ತುಕೊಂಡು ಸ್ಮಶಾನವಿಲ್ಲದ ಗ್ರಾಮ ಹಾಗೂ ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಕಾಲಮಿತಿ ಕಾರ್ಯಕ್ರಮ ಹಾಕಿಕೊಂಡಿದೆ.
ಸಂವಿಧಾನದ ಪರಿಚ್ಛೇದ 21ರ ಪ್ರಕಾರ ಪ್ರತಿ ಮೃತ ವ್ಯಕ್ತಿಯ ಅಂತ್ಯಕ್ರಿಯೆ ಅಥವಾ ಶವಸಂಸ್ಕಾರಕ್ಕೆ ಆತನ ಧರ್ಮ ಮತ್ತು ಸಂಪ್ರದಾಯದಂತೆ ಯೋಗ್ಯ ಮತ್ತು ಘನತೆಯ ವ್ಯವಸ್ಥೆ ಇರಬೇಕು. ಆದರೆ, ರಾಜ್ಯದ ಸಾವಿರಾರು ಗ್ರಾಮಗಳು ಮತ್ತು ಪಟ್ಟಣ ಪ್ರದೇಶಗಳಲ್ಲಿ ಇಲ್ಲಿತನಕ ಸ್ಮಶಾನ ಜಾಗ ಲಭ್ಯವಿರಲಿಲ್ಲ. ಈ ಬಗ್ಗೆ ಸರಕಾರದ ಮಟ್ಟದಲ್ಲಿ ಅನೇಕ ವರ್ಷಗಳಿಂದ ಆಗಾಗ ಚರ್ಚೆಗಳಾದರೂ ಕಾರ್ಯರೂಪಕ್ಕೆ ಇಳಿದಿರಲಿಲ್ಲ. ಈಗ ಹೈಕೋರ್ಟ್ ಚಾಟಿಗೆ ಬೆದರಿದ ಸರಕಾರ ಈ ನಿಟ್ಟಿನಲ್ಲಿ ಕ್ರವು ಕೈಗೊಳ್ಳುವ ನಿರ್ಧಾರಕ್ಕೆ ಬಂದಿದೆ.
ಶವಸಂಸ್ಕಾರಕ್ಕೆ ಗ್ರಾಮ ಮತ್ತು ಪಟ್ಟಣಗಳಲ್ಲಿ ಆರು ತಿಂಗಳಲ್ಲಿ ಅಗತ್ಯ ಭೂಮಿ ಒದಗಿಸಬೇಕು ಎಂದು ಹೈಕೋರ್ಟ್ 2019ರ ಆ.20ರಂದು ಆದೇಶ ನೀಡಿತ್ತು. ಅದರಂತೆ, ಅ.21ರಂದು ಕಂದಾಯ ಇಲಾಖೆ ಈ ಸಂಬಂಧ ಆದೇಶ ಹೊರಡಿಸಿದೆ. ನ್ಯಾಯಾಲಯದ ನಿರ್ದೇಶದನ್ವಯ ಅಗತ್ಯವಿರುವ ಗ್ರಾಮ ಮತ್ತು ನಗರಗಳಿಗೆ ಸ್ಮಶಾನ ಭೂಮಿಯ ಸೌಲಭ್ಯ ಒದಗಿಸಲು ಕಾಲಮಿತಿಯಲ್ಲಿ ಕ್ರಮ ಕೈಗೊಳ್ಳುವಂತೆ ಎಲ್ಲ ಡಿಸಿಗಳಿೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
2000-01ನೆ ಸಾಲಿನ ಅಂಕಿ ಅಂಶಗಳ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರತಿ ವರ್ಷ ಪ್ರತಿ 1 ಸಾವಿರ ಜನರಲ್ಲಿ ಸರಾಸರಿ 7 ರಿಂದ 8ಜನ ಸಾವನ್ನಪ್ಪುತ್ತಿದ್ದು ವಾರ್ಷಿಕ ಸಾವಿನ ಪ್ರಮಾಣ 10 ಜನ ಎಂದು ಭಾವಿಸಿ, ಮುಂದಿನ 30 ವರ್ಷಗಳಿಗೆ ಸಾವನ್ನಪ್ಪಬಹುದಾದ 300 ಜನರ ಶವಸಂಸ್ಕಾರಕ್ಕಾಗಿ ತಲಾ 60 ಚದರ ಅಡಿಯಂತೆ ಕನಿಷ್ಠ 18 ಸಾವಿರ ಚದರ ಅಡಿ ಅಂದರೆ 18ರಿಂದ 20 ಗುಂಟೆ ಜಾಗವನ್ನು ಶವ ಸಂಸ್ಕಾರದ ಉದ್ದೇಶಕ್ಕಾಗಿ ಕಾಯ್ದಿರಿಸಬೇಕು ಎಂದು 2014ರಲ್ಲಿ ಹೊರಡಿಸಲಾದ ಸುತ್ತೋಲೆಯನ್ನು ಕಂದಾಯ ಇಲಾಖೆ ಈಗಿನ ಆದೇಶದಲ್ಲಿ ಉಲ್ಲೇಖಿಸಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ-1964ರ ಪ್ರಕಾರ ರಾಜ್ಯದಲ್ಲಿ ಸರಕಾರಿ ಜಮೀನು ಲಭ್ಯವಿರುವ ಕಡೆ ವಿವಿಧ ಸಾರ್ವಜನಿಕ ಉದ್ದೇಶಗಳಿಗಾಗಿ ಅಗತ್ಯ ಜಮೀನು ಕಾಯ್ದಿರಿಸಲು ಡಿಸಿಗಳಿಗೆ ಅಧಿಕಾರವಿದೆ. ಅದರಂತೆ, ಸ್ಮಶಾನಕ್ಕಾಗಿ ಅಗತ್ಯ ಜಮೀನು ಕಾಯ್ದಿರಿಸಲು ಕ್ರಮ ಕೈಗೊಳ್ಳಬಹುದು. ಸರಕಾರಿ ಜಮೀನು ಲಭ್ಯವಿಲ್ಲದ ಕಡೆ ಗ್ರಾಮಗಳಲ್ಲಿ ಅಗತ್ಯವಾದ ಖಾಸಗಿ ಖುಷ್ಕಿ ಜಮೀನನ್ನು ಭೂ ಮಾಲಕರಿಂದ ಮಾರ್ಗಸೂಚಿ ದರದ ಮೂರು ಪಟ್ಟು ಹೆಚ್ಚು ಬೆಲೆಗೆ ಖರೀದಿಸಿ ಶವಸಂಸ್ಕಾರಕ್ಕೆ ಒದಗಿಸಲು ಡಿಸಿಗಳಿಗೆ ಸಂಪೂರ್ಣ ಅಧಿಕಾರವಿದೆ. ಹೀಗಾಗಿ, ಶವಸಂಸ್ಕಾರಕ್ಕೆ ಜಾಗವಿಲ್ಲದ ಗ್ರಾಮ ಮತ್ತು ನಗರಗಳಿಗೆ ಸ್ಮಶಾನ ಭೂಮಿ ಒದಗಿಸಲು ಈಗಿನ ಆದೇಶ ಸೇರಿ ಈ ಹಿಂದೆ ಕಾಲ, ಕಾಲಕ್ಕೆ ಸರಕಾರ ಹೊರಡಿಸಿರುವ ಆದೇಶ, ಸುತ್ತೋಲೆಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕಂದಾಯ ಇಾಖೆ ಎಲ್ಲ ಡಿಸಿಗಳಿಗೆ ತಾಕೀತು ಮಾಡಿದೆ.







