‘ಸಕಾಲ’ ಯೋಜನೆಯಡಿ 20ಕೋಟಿಗೂ ಹೆಚ್ಚು ಅರ್ಜಿ ವಿಲೇವಾರಿ: ಸಚಿವ ಸುರೇಶ್ ಕುಮಾರ್

ಬೆಂಗಳೂರು, ಅ. 28: ಸಕಾಲ ಯೋಜನೆಯಡಿ ಸೆಪ್ಟೆಂಬರ್ ತಿಂಗಳ ಅಂತ್ಯದ ವರೆಗೆ ಸುಮಾರು 20ಕೋಟಿಗೂ ಹೆಚ್ಚು ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ, ಕಾರ್ಮಿಕ ಸಚಿವ ಸುರೇಶ್‌ಕುಮಾರ್ ತಿಳಿಸಿದ್ದಾರೆ.
ಸೋಮವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸೆಪ್ಟೆಂಬರ್ ತಿಂಗಳ ಸಕಾಲ ವರದಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಸಕಾಲ ಯೋಜನೆಯಡಿ ಈ ವರೆಗೂ 20,09,94,713 ಅರ್ಜಿಗಳನ್ನು ಸ್ವೀಕರಿಸಿದ್ದು ಆ ಪೈಕಿ 20,02,84,447 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು.
ಸೆಪ್ಟೆಂಬರ್‌ನಲ್ಲಿ 25,76,030ಅರ್ಜಿಗಳನ್ನು ಸ್ವೀಕರಿಸಿದ್ದು ಆ ಪೈಕಿ 25,03,582 ಅರ್ಜಿಗಳನ್ನು ವಿಲೇವಾರಿ ಮಾಡಿದ್ದು, ಸೆಪ್ಟೆಂಬರ್‌ನಲ್ಲಿ ಶೇ. 97.18 ರಷ್ಟು ಗುರಿ ಸಾಧಿಸಲಾಗಿದೆ ಎಂದ ಅವರು, ಸೆಪ್ಟೆಂಬರ್ ತಿಂಗಳ ಸಕಾಲ ಯೋಜನೆಯ ಮೌಲ್ಯಮಾಪನ ಮಾಡಲಾಗಿದ್ದು ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ.
ಹಾಸನ ಜಿಲ್ಲೆ ದ್ವಿತೀಯ ಸ್ಥಾನ ಹಾಗೂ ಶಿವಮೊಗ್ಗ ಜಿಲ್ಲೆ ತೃತೀಯ ಸ್ಥಾನ ಪಡೆದಿದೆ. ಕಳಪೆ ಸಾಧನೆ ಮಾಡಿದ ಜಿಲ್ಲೆಗಳ ಪೈಕಿ ಬೆಂಗಳೂರು ನಗರ ಜಿಲ್ಲೆ 30ನೆ ಸ್ಥಾನವನ್ನು, ಬಾಗಲಕೋಟೆ ಜಿಲ್ಲೆ 29ನೆ ಸ್ಥಾನವನ್ನು ಹಾಗೂ ಬೀದರ್ ಜಿಲ್ಲೆ 28ನೆ ಸ್ಥಾನವನ್ನು ಪಡೆದಿವೆ ಎಂದು ಸುರೇಶ್‌ಕುಮಾರ್ ತಿಳಿಸಿದರು.
ಸಕಾಲ ಯೋಜನೆಯಡಿ ಕಾಲ್‌ಸೆಂಟರ್ ತೆರೆಯಲಾಗಿದ್ದು ಸೆಪ್ಟೆಂಬರ್ ತಿಂಗಳಿನಲ್ಲಿ 60 ಸಾವಿರ ಕರೆಗಳನ್ನು ಸ್ವೀಕಾರ ಮಾಡಿದ್ದು ಅತಿಹೆಚ್ಚು ಕರೆಗಳು ಅಂದರೆ 16,327 ಕರೆಗಳನ್ನು ಬೆಂಗಳೂರಿನಿಂದ ಸ್ವೀಕರಿಸಲಾಗಿದೆ ಎಂದ ಅವರು, ಆನ್‌ಲೈನ್ ಮೂಲಕ ಸೇವೆಗಳನ್ನು ಒದಗಿಸುವ ಸೇವಾ ಸಿಂಧು ಯೋಜನೆ ಪ್ರಾರಂಭಿಸಲಾಗಿದ್ದು ರಾಜ್ಯದಲ್ಲಿ 8 ಸಾವಿರ ಕೇಂದ್ರಗಳನ್ನು ತೆರೆಯಲಾಗಿದೆ.
ಜನರ ಮನೆಬಾಗಿಲಿಗೆ ಹೋಗಿ ಸೇವೆ ಒದಗಿಸುವ ಜನಸೇವಕ ಕಾರ್ಯಕ್ರಮವನ್ನು ನಗರದ ದಾಸರಹಳ್ಳಿ ಕ್ಷೇತ್ರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿದ್ದು ವೃದ್ಧರಿಗೆ ಈ ಯೋಜನೆಯಿಂದ ಲಾಭವಾಗಲಿದೆ ಎಂದ ಅವರು, ಸಕಾಲ ಯೋಜನೆಯಡಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಮಟ್ಟದ ಉತ್ತಮ ಅಧಿಕಾರಿಗೆ ಪ್ರಮಾಣ ಪತ್ರದೊಂದಿಗೆ 50ಸಾವಿರ ರೂ. ಪ್ರೋತ್ಸಾಹಧನ ಹಾಗೂ ಜಿಲ್ಲಾಮಟ್ಟದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವ ಅಧಿಕಾರಿಗೆ 10ಸಾವಿರ ರೂ. ಬಹುಮಾನ ನೀಡಲಾಗುವುದು ಎಂದು ಸುರೇಶ್‌ಕುಮಾರ್ ತಿಳಿಸಿದರು.
ಸಕಾಲ ಯೋಜನೆ ರಾಜ್ಯದ ಮಹಾತ್ವಾಕಾಂಕ್ಷೆ ಯೋಜನೆಯಾಗಿದ್ದು ಕೇಂದ್ರವು ರಾಜ್ಯದಿಂದ ಮಾಹಿತಿ ಪಡೆದಿದ್ದು ದೇಶಾದ್ಯಂತ್ಯ ಈ ಯೋಜನೆ ಜಾರಿಗೆ ತರಲು ಕೇಂದ್ರ ಸರಕಾರ ಬಯಸಿದೆ ಎಂದ ಅವರು, ಸಕಾಲದಲ್ಲಿ ಪ್ರಥಮ ಸ್ಥಾನ ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿ ಲತಾ ಅವರಿಗೆ ಪ್ರಶಂಸನಾ ಪತ್ರವನ್ನು ನೀಡಿದರು.
ಈ ಸಂದರ್ಭದಲ್ಲಿ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್, ಇ-ಆಡಳಿತದ ಹೆಚ್ಚುವರಿ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಸೇರಿದಂತೆ ಸಕಾಲ ಯೋಜನೆಯ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪತ್ರಿಜ್ಞಾ ವಿಧಿ ಬೋಧನೆ: ನಮ್ಮ ದೇಶದ ಆರ್ಥಿಕ, ರಾಜಕೀಯ ಮತ್ತು ಸಾಮಾಜಿಕ ಅಭಿವೃದ್ಧಿಗೆ ಭ್ರಷ್ಟಾಚಾರವು ಅಡಚಣೆಯಾಗಿದ್ದು, ಜೀವನದ ಎಲ್ಲ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮತ್ತು ಕಾನೂನಿನ ನಿಯಮಗಳನ್ನು ಅನುಸರಿಸುತ್ತೇನೆ, ಲಂಚವನ್ನು ಪಡೆಯುವುದಿಲ್ಲ ಹಾಗೂ ನೀಡುವುದಿಲ್ಲ ಮತ್ತು ಯಾವುದೇ ಭ್ರಷ್ಟಾಚಾರದ ಘಟನೆಯನ್ನು ಸೂಕ್ತ ಸಂಸ್ಥೆಗೆ ವರದಿ ಮಾಡುತ್ತೇನೆ ಎಂದು ಸಚಿವಾಲಯದ ಅಧಿಕಾರಿಗಳು, ಸಿಬ್ಬಂದಿಗೆ ಸಚಿವ ಸುರೇಶ್ ಕುಮಾರ್ ಅವರು ಜಾಗೃತಿ ಅರಿವು ಸಪ್ತಾಹದ ಹಿನ್ನೆಲೆಯಲ್ಲಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.
‘ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿಗಳ ಖಾತೆ, ಭೂ ಪರಿವರ್ತನೆಯಂತಹ ಸೇವೆಗಳನ್ನು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಒದಗಿಸಲಾಗುವುದು. ಮಧ್ಯವರ್ತಿಗಳ ಹಾವಳಿ ತಪ್ಪಿಸಲು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಕೆ ಕಡ್ಡಾಯಗೊಳಿಸಲಾಗುವುದು. ಈ ಸಂಬಂಧ ಸರಕಾರ ಶೀಘ್ರವೇ ಅಧಿಕೃತ ಆದೇಶ ಹೊರಡಿಸಲಿದೆ’
-ಟಿ.ಎಂ.ವಿಜಯ ಭಾಸ್ಕರ್ ಸರಕಾರದ ಮುಖ್ಯ ಕಾರ್ಯದರ್ಶಿ







