ಕೇರಳದ ಬಾಲಕಿಯರ ಅತ್ಯಾಚಾರ ಮತ್ತು ಸಾವು: ನ್ಯಾಯ ಕೋರಿ ಎನ್‌ಸಿಎಸ್‌ಸಿಗೆ ಅಹವಾಲು ಸಲ್ಲಿಕೆ

ಹೊಸದಿಲ್ಲಿ,ಅ.28: ಕೇರಳದಲ್ಲಿ ಇಬ್ಬರು ಅಪ್ರಾಪ್ತ ವಯಸ್ಕ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ್ದ ಮತ್ತು ಅವರ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ್ದ ಆರೋಪಿಗಳನ್ನು ಬಿಡುಗಡೆಗೊಳಿಸಿರುವುದಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡುವಂತೆ ಮತ್ತು ನ್ಯಾಯವನ್ನು ಒದಗಿಸುವಂತೆ ದಲಿತ ಸಾಮಾಜಿಕ ಕಾರ್ಯಕರ್ತ ವಿಪಿನ್ ಕೃಷ್ಣನ್ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ)ವನ್ನು ಆಗ್ರಹಿಸಿದ್ದಾರೆ.
ಪ್ರಕರಣದಲ್ಲಿ ಪೊಲೀಸರು ನಡೆಸಿದ್ದ ಆರಂಭಿಕ ತನಿಖೆಯಲ್ಲಿ ಹಲವಾರು ಲೋಪಗಳಿದ್ದವು ಎಂದು ಕೃಷ್ಣನ್ ಸೋಮವಾರ ಇಲ್ಲಿ ಆಯೋಗಕ್ಕೆ ಸಲ್ಲಿಸಿದ ಅಹವಾಲಿನಲ್ಲಿ ಆರೋಪಿಸಿದ್ದಾರೆ.
ವಾಸ್ತವದಲ್ಲಿ ಪೊಲೀಸರು ಆರೋಪಿಗಳಿಗೆ ನೆರವಾಗಲು ತನಿಖೆಯನ್ನೇ ಬುಡಮೇಲುಗೊಳಿಸಿದ್ದಾರೆ. ಇದರಿಂದಾಗಿ ಪ್ರಾಸಿಕ್ಯೂಷನ್‌ಗೆ ಆರೋಪ ಸಾಬೀತು ಮಾಡಲು ಸಾಧ್ಯವಾಗಲಿಲ್ಲ ಮತ್ತು ಪಾಲಕ್ಕಾಡ್ ಜಿಲ್ಲೆಯ ವಿಶೇಷ ಪೊಕ್ಸೊ ನ್ಯಾಯಾಲಯವು ಆರೋಪಿಗಳನ್ನು ಖುಲಾಸಗೊಳಿಸಿದೆ ಎಂದು ಅವರು ತಿಳಿಸಿದರು.
ಪಾಲಕ್ಕಾಡ್ ಜಿಲ್ಲೆಯ ವಲಯಾರ್ ಸಮೀಪದ ಅಟ್ಟಪಳ್ಳಮ್‌ನ ಶೆಲ್ವಪುರಂ ನಿವಾಸಿಗಳಾಗಿದ್ದ 11 ಮತ್ತು ಒಂಭತ್ತರ ಹರೆಯದ ಇಬ್ಬರು ಬಾಲಕಿಯರು ಅನುಕ್ರಮವಾಗಿ 2017,ಜನವರಿ ಮತ್ತು ಮಾರ್ಚ್‌ನಲ್ಲಿ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತು ಎಂದು ಮರಣೋತ್ತರ ಪರೀಕ್ಷಾ ವರದಿಗಳು ಬೆಟ್ಟುಮಾಡಿದ್ದವು. ಪೊಲೀಸರು ನಾಲ್ವರನ್ನು ಬಂಧಿಸಿದ್ದು,ಅವರ ಪೈಕಿ ಓರ್ವ ಈ ವರ್ಷದ ಸೆಪ್ಟೆಂಬರ್‌ನಲ್ಲಿ ಮತ್ತು ಇತರ ಮೂವರು ಅ.25ರಂದು ಬಿಡುಗಡೆಗೊಂಡಿದ್ದಾರೆ.







