ಮಡಿಕೇರಿಯ ಉಪನ್ಯಾಸಕಿ ಕೆ.ಜಯಲಕ್ಷ್ಮಿಗೆ ಚಿನ್ಮಯ ಜ್ಞಾನಿ ಪ್ರಶಸ್ತಿ

ಮಡಿಕೇರಿ,ಅ.28: ಶಿಕ್ಷಣ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿನ ಮಹತ್ವದ ಸಾಧನೆಗಾಗಿ ಮಡಿಕೇರಿಯ ಉಪನ್ಯಾಸಕಿ ಕೆ.ಜಯಲಕ್ಷ್ಮಿ ಅವರಿಗೆ ಮೈಸೂರಿನ ಶರಣು ವಿಶ್ವಮಾನವ ಫೌಂಡೇಷನ್ ವತಿಯಿಂದ ಚಿನ್ಮಯಜ್ಞಾನಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಬೆಂಗಳೂರಿನಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಕೆ.ಜಯಲಕ್ಷ್ಮಿ ಅವರಿಗೆ ಬೇಲಿಮಠದ ಶಿವಾನುಭವ ಚಿರಮೂರ್ತಿ ಶ್ರೀಶಿವರುದ್ರಮಹಾಸ್ವಾಮಿ ಅವರು ಪ್ರಶಸ್ತಿ ಪ್ರದಾನ ಮಾಡಿದರು. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟದ ಅಧ್ಯಕ್ಷ ಎನ್.ತಿಮ್ಮಯ್ಯ, ಶರಣು ವಿಶ್ವವಚನ ಫೌಂಡೇಶನ್ ನ ಸಂಸ್ಥಾಪಕರಾದ ವಚನಕುಮಾರ ಸ್ವಾಮಿ, ರೂಪ ವಚನ ಕುಮಾರ ಸ್ವಾಮಿ ಹಾಜರಿದ್ದರು.
ಜಯಲಕ್ಷ್ಮಿ ಅವರು ಮಡಿಕೇರಿಯ ಸಂತ ಜೋಸೇಫರ ಪ.ಪೂ.ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು ಸಮರ್ಥ ಕನ್ನಡಿಗ ಸಂಸ್ಥೆಯ ಜಿಲ್ಲಾ ಸಂಚಾಲಕಿಯಾಗಿದ್ದಾರೆ. ಜಿಲ್ಲಾ ಜಾನಪದ ಪರಿಷತ್ ನ ನಿರ್ದೇಶಕಿಯಾಗಿಯೂ ಕಾರ್ಯನಿರ್ವಹಿಸುತ್ತಿರುವ ಜಯಲಕ್ಷ್ಮಿಕಥೆ, ಕವನ, ಪ್ರಬಂಧ ಸಾಹಿತ್ಯದಲ್ಲಿ ಸಕ್ರಿಯರಾಗಿದ್ದಾರೆ.





