ಕಾಂಗ್ರೆಸ್ ನಾಯಕರಿಂದ ಮಾಜಿ ಸಚಿವ ಡಿಕೆಶಿ ಭೇಟಿ
![ಕಾಂಗ್ರೆಸ್ ನಾಯಕರಿಂದ ಮಾಜಿ ಸಚಿವ ಡಿಕೆಶಿ ಭೇಟಿ ಕಾಂಗ್ರೆಸ್ ನಾಯಕರಿಂದ ಮಾಜಿ ಸಚಿವ ಡಿಕೆಶಿ ಭೇಟಿ](https://www.varthabharati.in/sites/default/files/images/articles/2019/10/29/216868-1572357262.jpg)
ಬೆಂಗಳೂರು, ಅ.29: ತಿಹಾರ್ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದಿರುವ ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಸದಾಶಿವನಗರದಲ್ಲಿರುವ ನಿವಾಸಕ್ಕೆ ಇಂದು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು ಭೇಟಿ ನೀಡಿ ಮಾತುಕತೆ ನಡೆಸಿದರು.
ಮಾಜಿ ಸಚಿವರಾದ ಎಚ್.ಕೆ.ಪಾಟೀಲ್, ರಾಮಲಿಂಗಾರೆಡ್ಡಿ, ಆರ್.ವಿ.ದೇಶಪಾಂಡೆ, ಮೋಟಮ್ಮ, ರಾಣಿ ಸತೀಶ್, ಮಾಜಿ ರಾಜ್ಯಪಾಲೆ ಮಾರ್ಗರೇಟ್ ಆಳ್ವ, ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ, ಜೆಡಿಎಸ್ ಅನರ್ಹ ಶಾಸಕ ನಾರಾಯಣಗೌಡ ಸೇರಿದಂತೆ ಇನ್ನಿತರರ ಮುಖಂಡರು, ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದರು.
ಡಿ.ಕೆ.ಶಿವಕುಮಾರ್ ಜೊತೆ ಯಾವುದೇ ಬಗೆಯ ರಾಜಕೀಯ ವಿಚಾರಗಳ ಕುರಿತು ಚರ್ಚೆ ಮಾಡಿಲ್ಲ. ಈಡಿ ಅಧಿಕಾರಿಗಳನ್ನು ಅವರನ್ನು ಬಂಧಿಸಿದಾಗ ಅವರನ್ನು ಭೇಟಿ ಮಾಡಲು ಆಸ್ಪತ್ರೆಗೆ ಹೋಗಿದ್ದೆ. ಕಳೆದ ಮೂರು ದಿನಗಳಿಂದ ಅವರನ್ನು ಭೇಟಿಯಾಗಲು ಸಾಧ್ಯವಾಗಿಲ್ಲ. ಆದುದರಿಂದ, ಇವತ್ತು ಬಂದು ಭೇಟಿಯಾಗಿದ್ದೇನೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಡಿ.ಕೆ.ಶಿವಕುಮಾರ್ ಯಾವತ್ತಿದ್ದರೂ ಒಬ್ಬ ಪ್ರಬಲ ನಾಯಕ. ಯಾವುದೇ ಸಮಸ್ಯೆಗಳು ಎದುರಾದರೂ ಅದನ್ನು ಎದುರಿಸುವಂತಹ ಎದೆಗಾರಿಕೆ ಡಿ.ಕೆ.ಶಿವಕುಮಾರ್ಗಿದೆ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಮಾಜಿ ಸ್ಪೀಕರ್ ಕೆ.ಬಿ.ಕೋಳಿವಾಡ ಮಾತನಾಡಿ, ಬಿಜೆಪಿ ಅಧಿಕಾರ ದುರುಪಯೋಗಪಡಿಸಿಕೊಂಡು ವಿರೋಧ ಪಕ್ಷಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ದಿನೇ ದಿನೇ ಮೋದಿ ವರ್ಚಸ್ಸು ಕಳೆದುಕೊಳ್ಳುತ್ತಿದ್ದಾರೆ. ಕೇವಲ ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದೆ ಎಂದು ಟೀಕಿಸಿದರು.
ಬಿಜೆಪಿಯ ತಂತ್ರಗಾರಿಕೆ ಜನಸಾಮಾನ್ಯರಿಗೆ ಗೊತ್ತಾಗುತ್ತಿದೆ. ಶೀಘ್ರದಲ್ಲಿಯೇ ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರದ ಗದ್ದುಗೆ ಏರಲಿದೆ. ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದ್ದೇನೆ ಎಂದು ಅವರು ತಿಳಿಸಿದರು.