ಮಂಡ್ಯದಲ್ಲಿ ಪಿಎಫ್ಐ ಕಾರ್ಯಕರ್ತರ ಬಂಧನದ ವಿರುದ್ಧ ಕಾನೂನು ಹೋರಾಟ
ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ

ಬೆಂಗಳೂರು, ಅ.29: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ)ದ ಸಂಸ್ಥಾಪನಾ ದಿನದ ಪ್ರಯುಕ್ತ ನಡೆಯುವ ‘ಯೂನಿಟಿ ಮಾರ್ಚ್ ಪರೇಡ್’ಗಾಗಿ ಮಂಡ್ಯ ಜಿಲ್ಲೆಯಲ್ಲಿ ಅಭ್ಯಾಸದಲ್ಲಿ ತೊಡಗಿದ್ದ ಕಾರ್ಯಕರ್ತರನ್ನು ಬಂಧಿಸಿದ ಪೊಲೀಸರ ಕ್ರಮ ಹಾಗೂ ಘಟನೆಯನ್ನು ಕಪೋಲಕಲ್ಪಿತವಾಗಿ ವರದಿ ಪ್ರಕಟಿಸಿವೆ ಎನ್ನಲಾದ ಕೆಲವು ಮಾಧ್ಯಮಗಳ ಧೋರಣೆಯನ್ನು ಪಿಎಫ್ಐ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಷ ತೀವ್ರವಾಗಿ ಖಂಡಿಸಿದ್ದಾರೆ.
"ದೇಶದಾದ್ಯಂತ ಪಿಎಫ್ಐ ಕಳೆದ 11 ವರ್ಷಗಳಿಂದ ಸಂಸ್ಥಾಪನಾ ದಿನದಂದು ಪರೇಡ್ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಫೆ.17ರ ಸಂಸ್ಥಾಪನಾ ದಿನದ ಕಾರ್ಯಕ್ರಮದ ಪೂರ್ವಭಾವಿ ಎಲ್ಲೆಡೆ ನಡೆಯುತ್ತಿದ್ದು ‘ಯೂನಿಟಿ ಮಾರ್ಚ್’ಗಾಗಿ ಕಾರ್ಯಕರ್ತರಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಇದರ ಭಾಗವಾಗಿ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಆಲಂಬಾಡಿ ಕಾವಲ್ ಗ್ರಾಮದಲ್ಲಿ ಜನಜಂಗುಳಿ ಪ್ರದೇಶವಾದ ಗೌಸ್ಪೀರ್ ದರ್ಗಾ ಬಳಿ ಇರುವ ಕಬ್ಬಿನ ಗದ್ದೆಯಲ್ಲಿ ಸ್ಥಳೀಯ ಕಾರ್ಯಕರ್ತರು ಸೋಮವಾರ ಪರೇಡ್ ಅಭ್ಯಾಸದಲ್ಲಿ ತೊಡಗಿದ್ದರು. ಆದರೆ ಸ್ಥಳೀಯ ಕೆಲವು ಕೋಮುವಾದಿ ಸಂಘಟನೆಗೆ ಸೇರಿದ ಕಾರ್ಯಕರ್ತರು ನೀಡಿದ ಮಾಹಿತಿಯ ಆಧಾರದಲ್ಲಿ ಪೊಲೀಸರು ಸತ್ಯಾಸತ್ಯತೆ ತಿಳಿಯದೆ ಸ್ಥಳಕ್ಕೆ ಧಾವಿಸಿ ನಮ್ಮ ಕಾರ್ಯಕರ್ತರನ್ನು ವಶಕ್ಕೆ ಪಡೆದಿರುವುದು ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಅಲ್ಲದೆ, ಕಾರ್ಯಕರ್ತರ ವಿರುದ್ಧ ಸೆಕ್ಷನ್ 153ರಡಿ ಪ್ರಕರಣ ದಾಖಲಿಸಿದ್ದು ಖಂಡನೀಯ ಎಂದು ಅವರು ತಿಳಿಸಿದ್ದಾರೆ.
ಕೆಲವು ಪ್ರಾಯೋಜಿತ ಮಾಧ್ಯಮಗಳು ಸಂಘಟನೆಯ ವರ್ಚಸ್ಸಿಗೆ ಮಸಿ ಬಳಿಯುವ ಹುನ್ನಾರದ ಭಾಗವಾಗಿ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಪತ್ರಿಕಾ ಧರ್ಮದ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಮಾಧ್ಯಮಗಳ ಫ್ಯಾಶಿಸ್ಟ್ ಧೋರಣೆಯಿಂದಾಗಿ ನಾಡಿನ ಶಾಂತಿಯು ಕದಡುವ ಅಪಾಯವಿದೆ. ಪೊಲೀಸ್ ವರಿಷ್ಠಾಧಿಕಾರಿಯ ಸ್ಪಷ್ಟೀಕರಣಕ್ಕೆ ವ್ಯತಿರಿಕ್ತವಾದ ವರದಿ ಪ್ರಕಟಿಸುತ್ತಿರುವ ಮಾಧ್ಯಮದ ಉದ್ದೇಶವು ಸ್ಪಷ್ಟವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಮಾಯಕರನ್ನು ಬಂಧಿಸಿದ ಪೊಲೀಸ್ ಅಧಿಕಾರಿಗಳು ಮತ್ತು ಈ ಬಗ್ಗೆ ಸುಳ್ಳು ಸುದ್ದಿ ಪ್ರಕಟಿಸಿದ ಮಾಧ್ಯಮಗಳ ಮೇಲೆ ಕಾನೂನು ಹೋರಾಟ ನಡೆಸಲಾಗುವುದು ಎಂದು ನಾಸಿರ್ ಪಾಷ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.