ಗುಣಶೇಖರನ್‌ಗೆ ಟೋಕಿಯೋ ಪ್ಯಾರಾಲಿಂಪಿಕ್‌ನಲ್ಲಿ ಸ್ಪರ್ಧಿಸುವ ಗುರಿ

ಹೊಸದಿಲ್ಲಿ, ಅ.29: ಜಮ್ಮು ಮತ್ತು ಕಾಶ್ಮೀರದ ನಿಯಂತ್ರಣ ರೇಖೆ (ಎಲ್‌ಒಸಿ) ಬಳಿ 2008ರಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಡಗಾಲನ್ನು ಕಳೆದುಕೊಂಡ ಸೇನಾ ಯೋಧ ಇತ್ತೀಚೆಗೆ ಚೀನಾದಲ್ಲಿ ನಡೆದ ಮಿಲಿಟರಿ ವಿಶ್ವ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗಳಿಸುವ ಮೂಲಕ ಭಾರತಕ್ಕೆ ಹೆಮ್ಮೆ ತಂದಿದ್ದಾರೆ.
ಚೀನಾದ ವುಹಾನ್ ನಗರದಲ್ಲಿ ನಡೆದ ಏಳನೇ ಆವೃತ್ತಿಯ ವಿಶ್ವ ಮಿಲಿಟರಿ ಕ್ರೀಡಾಕೂಟದಲ್ಲಿ ಪ್ಯಾರಾಥ್ಲೀಟ್‌ಗಳಿಗಾಗಿ ನಡೆದ 100 ಮೀ., 200 ಮೀ. ಮತ್ತು 400 ಮೀ ಓಟದ ಸ್ಪರ್ಧೆಗಳಲ್ಲಿ ಯೋಧ ಆನಂದನ್ ಗುಣಶೇಖರನ್ (32) ಚಿನ್ನ ಜಯಿಸಿದ್ದಾರೆ.
ವುಹಾನ್‌ನಿಂದ ಸೋಮವಾರ ತವರಿಗೆ ವಾಪಸಾಗಿರುವ ಗುಣಶೇಖರನ್ 2020 ರಲ್ಲಿ ಟೋಕಿಯೋ ಪ್ಯಾರಾಲಿಂಪಿಕ್‌ನಲ್ಲಿ ಸ್ಪರ್ಧಿಸುವುದು ತಮ್ಮ ಮುಂದಿನ ಗುರಿಯಾಗಿದೆ ಎಂದು ಹೇಳಿದ್ದಾರೆ ಟೋಕಿಯೊ ಪ್ಯಾರಾಲಿಂಪಿಕ್‌ನ 200 ಮೀಟರ್ ಓಟಕ್ಕಾಗಿ ನನ್ನ ಅಂತಿಮ ಸ್ಪರ್ಧೆ ಮುಂದಿನ ವರ್ಷ ಮೇ ತಿಂಗಳಲ್ಲಿ ನಡೆಯಲಿದೆ. ಟೋಕಿಯೊ ಕ್ರೀಡಾಕೂಟಕ್ಕೆ ಆಯ್ಕೆಯಾಗುವುದು ಈಗ ನನ್ನ ಮುಂದೆ ಉಳಿದಿರುವ ಏಕೈಕ ಗುರಿಯಾಗಿದೆ ಎಂದು ಅವರು ಹೇಳಿದರು.
ಇದಕ್ಕೂ ಮುನ್ನ ಆಗಸ್ಟ್‌ನಲ್ಲಿ ಪ್ಯಾರಿಸ್‌ನಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರೀ ನಲ್ಲಿ ಗುಣಶೇಖರನ್ 200 ಮೀ. ಮತ್ತು 2015ರ ಅಕ್ಟೋಬರ್‌ನಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆದ ಮಿಲಿಟರಿ ವಿಶ್ವ ಕ್ರೀಡಾಕೂಟದ ಕಳೆದ ಆವೃತ್ತಿಯಲ್ಲಿ ಗುಣಶೇಖರನ್ 100 ಮೀಟರ್ ಓಟದಲ್ಲಿ ಬೆಳ್ಳಿ ಮತ್ತು 200 ಮೀ. ಓಟದಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಓರ್ವ ಶ್ರೇಷ್ಠ ಕ್ರೀಡಾಪಟು ಆಗಿರುವ ಗುಣಶೇಖರನ್ ಸೆಪ್ಟಂಬರ್ 2005ರಲ್ಲಿ ಭಾರತೀಯ ಸೇನೆಯ ಮದ್ರಾಸ್ ಸ್ಯಾಪರ್ಸ್‌ಗೆ ಸೇರ್ಪಡೆಗೊಂಡರು. ಬಾಂಬ್ ಸ್ಫೋಟದಿಂದಾಗಿ ಶಾಶ್ವತವಾಗಿ ಅಂಗವಿಕಲರಾಗಿ ಬದಲಾದ ನಂತರವೇ ಸ್ಪರ್ಧಾತ್ಮಕ ಓಟಕ್ಕೆ ಮುಂದಾದರು.
ಜಮ್ಮು ಮತ್ತು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ನೌಗಮ್ ಸೆಕ್ಟರ್‌ನಲ್ಲಿ ಜೂನ್ 4, 2008 ರಂದು ನಡೆದ ಘಟನೆಯನ್ನು ಅವರು ಸ್ಪಷ್ಟವಾಗಿ ನೆನಪಿಸಿಕೊಳ್ಳುತ್ತಾರೆ.
ಆ ದಿನ ನಾನು ನಿಯಂತ್ರಣ ರೇಖೆಯ ಉದ್ದಕ್ಕೂ ತಂತಿ ಬೇಲಿಯ ಬಳಿ ತಪಾಸಣೆ ಮುಗಿಸಿದ ನಂತರ ಇತರ ಮೂವರು ಸೈನಿಕರೊಂದಿಗೆ ಇಳಿಜಾರಿನಲ್ಲಿ ಇಳಿಯುತ್ತಿದ್ದೆ. ಮೂವರು ಸಹೋದ್ಯೋಗಿಗಳು ನನ್ನ ಮುಂದೆ ನಡೆಯುತ್ತಿದ್ದರು. ನಾನು ಇಳಿಜಾರಿನಿಂದ ಇಳಿಯುವಾಗ ಗುಂಪಿನ ಕೊನೆಯಲ್ಲಿದ್ದ ಭೂ ಕುಸಿತದ ಅನುಭವ ಉಂಟಾಯಿತು. ಅಲ್ಲಿ ಹುದುಗಿಸಿಡಲಾದ ಸ್ಫೋಟಕದ ಮೇಲೆ ಕಾಲಿಟ್ಟಾಗ ಸ್ಪೋಟಕ ಸಿಡಿಯಿತು’’ ಎಂದರು.
ಗಾಯಗೊಂಡ ಗುಣಶೇಖರನ್ ಅವರನ್ನು ಶ್ರೀನಗರದ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರ ಕಾಲನ್ನು ಕತ್ತರಿಸಲಾಯಿತು. ಶ್ರೀನಗರದಲ್ಲಿ ಒಂದು ತಿಂಗಳ ಚಿಕಿತ್ಸೆಯ ನಂತರ ಅವರನ್ನು ಪುಣೆಯ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು, ಆರು ತಿಂಗಳ ತನಕ ನನ್ನ ಕುಟುಂಬ ಸದಸ್ಯರಿಗೆ ಈ ಬಗ್ಗೆ ಅವರು ಮಾಹಿತಿ ನೀಡಲಿಲ್ಲ. ತಮಿಳುನಾಡಿನ ಕುಂಬಕೋಣಂನಲ್ಲಿರುವ ತನ್ನ ಮನೆಗೆ ಅದೊಂದು ದಿನ ಕೃತಕ ಕಾಲಿನೊಂದಿಗೆ ತಲುಪಿದರು. ಸೊಂಕು ತಗಲಿದ ಹಿನ್ನೆಲೆಯಲ್ಲಿ ನನ್ನ ಕಾಲನ್ನು ಕತ್ತರಿಸಬೇಕಾಯಿತು ಎಂದು ಕುಟುಂಬದ ಸದಸ್ಯರಿಗೆ ಸುಳ್ಳು ಹೇಳಿದರು. ಗುಣಶೇಖರನ್ ಮತ್ತೆ ಕರ್ತವ್ಯಕ್ಕೆ ಸೇರುವುದನ್ನು ತಾಯಿ ಇಷ್ಟಪಡಲಿಲ್ಲ. ಆದಾಗ್ಯೂ ನಾನು ಮನೆಯಿಂದ ಓಡಿಹೋಗಿ ಮತ್ತೆ ನನ್ನ ಘಟಕಕ್ಕೆ ಸೇರಿಕೊಂಡೆ ಎಂದು ಗುಣಶೇಖರನ್ ಹಳೆಯ ಘಟನೆಯನ್ನು ನೆನಪಿಸಿಕೊಂಡರು.
ಈ ಸಂದರ್ಭದಲ್ಲಿ ಗುಣಶೇಖರನ್ ಅವರು ದಕ್ಷಿಣ ಆಫ್ರಿಕಾದ ಬ್ಲೇಡ್ ರನ್ನರ್ ಆಸ್ಕರ್ ಪಿಸ್ಟೋರಿಯಸ್ ಬಗ್ಗೆ ತಿಳಿದುಕೊಂಡರು. 2013 ರಲ್ಲಿ ತನ್ನ ಗೆಳತಿ ರೀವಾ ಸ್ಟೀನ್ ಕ್ಯಾಂಪ್ ಕೊಲೆ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುವ ಮೊದಲು ಪಿಸ್ಟೋರಿಯಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ವಿವಿಧ ಓಟದ ಸ್ಪರ್ಧೆಗಳಲ್ಲಿ ಆರು ಚಿನ್ನದ ಪದಕಗಳನ್ನು ಜಯಿಸಿದ್ದರು. ಗುಣಶೇಖರನ್ 2012 ರ ಮುಂಬೈ ಮ್ಯಾರಥಾನ್‌ನಲ್ಲಿ ಮರದ ಕೃತಕ ಕಾಲಿನಿಂದ ಓಡಿ 9.58 ನಿಮಿಷಗಳಲ್ಲಿ 2.5 ಕಿ.ಮೀ ದೂರವನ್ನು ಕ್ರಮಿಸಿದರು. ಅದರ ನಂತರ, ಅವರು 2014 ರಲ್ಲಿ ಭಾರತೀಯ ಸೇನೆಯು ಒದಗಿಸಿದ ಪ್ರಾಸ್ಥೆಟಿಕ್ ಬ್ಲೇಡ್‌ಗಾಗಿ ತಮ್ಮ ಘಟಕ ಕಮಾಂಡರ್ ಅವರನ್ನು ಕೇಳಿದರು.
ಓಡಲು ಬ್ಲೇಡ್ ಬಳಸುವುದು ಸುಲಭವಲ್ಲ, ನಾನು ಹಲವಾರು ಬಾರಿ ಉರುಳಿದೆ. ನಿಯಮಿತ ಅಭ್ಯಾಸದ ನಂತರ, ನಾನು 2014 ರಲ್ಲಿ ಅಂತರ್‌ರಾಷ್ಟ್ರೀಯ ಪ್ಯಾರಾಲಿಂಪಿಕ್ ಗ್ರ್ಯಾಂಡ್ ಪ್ರಿನಲ್ಲಿ ಸ್ಪರ್ಧಿಸಿದ್ದೆ, ಅಲ್ಲಿ ನಾನು ಎರಡು ಚಿನ್ನದ ಪದಕಗಳನ್ನು ಮತ್ತು ಬೆಳ್ಳಿ ಪದಕವನ್ನು ಜಯಿಸಿದೆ. ಅಲ್ಲಿಂದ ನಾನು ನಿಯಮಿತವಾಗಿ ಅಂತರ್‌ರಾಷ್ಟ್ರೀಯ ಪಂದ್ಯಗಳಲ್ಲಿ ಸ್ಪರ್ಧಿಸಿದೆ. 2013 ರಲ್ಲಿ ಕಾಲೇಜು ಉಪನ್ಯಾಸಕಿಯೊಬ್ಬರನ್ನು ಮದುವೆಯಾದ ಗುಣಶೇಖರನ್ ಅವಳಿ ಮಕ್ಕಳ ತಂದೆಯಾಗಿದ್ದಾರೆ. ಇದೀಗ ಬೆಂಗಳೂರಿನಲ್ಲಿ ಮದ್ರಾಸ್ ಸ್ಯಾಪರ್ಸ್‌ನಲ್ಲಿ ಸೇನಾ ಕರ್ತವ್ಯದಲ್ಲಿದ್ದಾರೆ.







