ನಿವೃತ್ತ ಲೋಕಾಯುಕ್ತ ನ್ಯಾ. ಎನ್.ವೆಂಕಟಾಚಲ ನಿಧನ

ಬೆಂಗಳೂರು, ಅ. 30: ಲೋಕಾಯುಕ್ತ ಸಂಸ್ಥೆ ಮೂಲಕ ಭ್ರಷ್ಟರಿಗೆ ಸಿಂಹ ಸ್ವಪ್ನವಾಗಿದ್ದ ನಿವೃತ್ತ ನ್ಯಾ.ಎನ್.ವೆಂಕಟಾಚಲ(90) ವಯೋಸಹಜ ಕಾಯಿಲೆ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಪತ್ನಿ, ಮೂವರು ಪುತ್ರರು ಮತ್ತು ಓರ್ವ ಪುತ್ರಿ ಸೇರಿದಂತೆ ಅಪಾರ ಸಂಖ್ಯೆ ಬಂಧು-ಮಿತ್ರರನ್ನು ಅವರು ಅಗಲಿದ್ದಾರೆ. ನ್ಯಾ.ವೆಂಕಟಾಚಲ ಲೋಕಾಯುಕ್ತರಾಗಿ ನೇಮಕಗೊಂಡ ನಂತರ ಸರಕಾರಿ ಅಧಿಕಾರಿಗಳಲ್ಲಿ ಲೋಕಾಯುಕ್ತ ಸಂಸ್ಥೆ ಭಯ ಹಾಗೂ ಜನರ ಕಷ್ಟಕ್ಕೆ ಲೋಕಾಯುಕ್ತದಿಂದ ಪರಿಹಾರ ಸಾಧ್ಯ ಎಂಬುದನ್ನು ಅವರು ತೋರಿಸಿಕೊಟ್ಟಿದ್ದರು.
ನಗರದ ಬಳ್ಳಾರಿ ರಸ್ತೆಯ ಕಾವೇರಿ ಚಿತ್ರಮಂದಿರ ಹಿಂಭಾಗದಲ್ಲಿನ ತಮ್ಮ ನಿವಾಸದಲ್ಲಿದ್ದ ಅವರಿಗೆ ಬುಧವಾರ ಬೆಳಗ್ಗೆ 5.45ಕ್ಕೆ ಎದೆನೋವು ಕಾಣಿಸಿಕೊಂಡಿತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಓರ್ವ ಪುತ್ರ ಮತ್ತು ಪುತ್ರಿ ಅಮೆರಿಕದಲ್ಲಿದ್ದು ಅವರು ಬಂದ ನಂತರ ಗುರುವಾರ (ಅ.31) ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರ ಮನೆಯಲ್ಲಿಯೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ.
ಎನ್.ವೆಂಕಟಾಚಲ ಅವರು 1930ರ ಜುಲೈ 3ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಮಿಟ್ಟೂರಿನ ಕೃಷಿ ಕುಟುಂಬದಲ್ಲಿ ಜನಿಸಿದ್ದು, ಮುಳಬಾಗಿಲಿನಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣ ಪೂರೈಸಿದರು. ಕೋಲಾರದಲ್ಲಿ ಪ್ರೌಢಶಾಲೆ ಮತ್ತು ಬೆಂಗಳೂರಿನಲ್ಲಿ ಕಾಲೇಜು ಶಿಕ್ಷಣ ಪಡೆದ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿಎಸ್ಸಿ ಮತ್ತು ಕಾನೂನು ಪದವಿ ಪಡೆದರು. ಬೆಂಗಳೂರಿನಲ್ಲಿ ವಕೀಲರಾಗಿ ವೃತ್ತಿ ಆರಂಭಿಸಿದ ವೆಂಕಟಾಚಲ, ಸಿವಿಲ್, ಕ್ರಿಮಿನಲ್ ಮತ್ತು ಸಾಂವಿಧಾನಿಕ ಪ್ರಕರಣಗಳಲ್ಲಿ ಹೆಚ್ಚಿನ ಪರಿಣತಿ ಪಡೆದುಕೊಂಡರು. 1963ರಿಂದ 1973ರ ವರೆಗೆ ಹೆಬ್ಬಾಳ ಕೃಷಿ ವಿವಿ ಕಾನೂನು ಸಲಹೆಗಾರರಾಗಿದ್ದರು. 1973ರಿಂದ 1977ರವರೆಗೆ ಬೆಂಗಳೂರು ವಿವಿ ಸಲಹೆಗಾರರೂ ಆಗಿದ್ದರು.
1977ರ ನ.28ರಂದು ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕವಾದ ಅವರು, 1992ರ ಮೇ ತಿಂಗಳಲ್ಲಿ ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. 1992ರ ಜುಲೈ 1ರಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಹೊಂದಿ, 1995ರ ಜುಲೈ 2ರಂದು ನಿವೃತ್ತರಾದರು. 2001ರ ಜುಲೈ 2ರಂದು ಲೋಕಾಯುಕ್ತರಾಗಿ ಅಧಿಕಾರ ಸ್ವೀಕರಿಸಿ ತಮ್ಮ ಕರ್ತವ್ಯದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
ಗಣ್ಯರ ಸಂತಾಪ: ಲೋಕಾಯುಕ್ತ ನಿವೃತ್ತ ನ್ಯಾ.ವೆಂಕಟಾಚಲ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಹಲವು ಗಣ್ಯರು ಕಂಬನಿ ಮಿಡಿದಿದ್ದಾರೆ.
‘ಕರ್ನಾಟಕದ ಮಾಜಿ ಲೋಕಾಯುಕ್ತ ಮತ್ತು ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಎನ್.ವೆಂಕಟಾಚಲ ಅವರ ನಿಧನದ ಸುದ್ದಿ ಕೇಳಿ ನೋವಾಯಿತು. ನ್ಯಾ.ವೆಂಕಟಾಚಲ ಅವರು ಲೋಕಾಯುಕ್ತರಾಗಿ ಭ್ರಷ್ಟರ ವಿರುದ್ಧ ಸಮರವನ್ನೇ ಸಾರಿ ರಾಜ್ಯದಲ್ಲಿ ಸಂಚಲನ ಸೃಷ್ಟಿಸಿದ್ದರು. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಟ್ವಿಟ್ಟರ್ ಮೂಲಕ ಸಂಪಾತ ಸೂಚಿಸಿದ್ದಾರೆ.
‘ಲೋಕಾಯುಕ್ತಕ್ಕೆ ಅನ್ವರ್ಥನಾಮ ಎಂಬಂತಿದ್ದ, ಭ್ರಷ್ಟರಿಗೆ ಸಿಂಹಸ್ವಪ್ನವಾಗಿದ್ದ ನಿವೃತ್ತ ನ್ಯಾ.ಎನ್.ವೆಂಕಟಾಚಲ ಅವರ ನಿಧನ ಅತೀವ ನೋವುಂಟು ಮಾಡಿದೆ. ಅತ್ಯಂತ ಕ್ರಿಯಾಶೀಲ ವ್ಯಕ್ತಿತ್ವದ ಅವರು ಲೋಕಾಯುಕ್ತಕ್ಕೆ ಕಾಯಕಲ್ಪ ನೀಡಿದವರು. ಅವರ ಅಗಲಿಕೆ ಸಮಾಜದ ಬಹುದೊಡ್ಡ ನಷ್ಟ’ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
‘ಲೋಕಾಯುಕ್ತ ನ್ಯಾ. ವೆಂಕಟಾಚಲ ಅವರ ನಿಧನ ತೀವ್ರ ನೋವುಂಟುಮಾಡಿದೆ. ಲೋಕಾಯುಕ್ತದ ಶಕ್ತಿಯನ್ನು ದಕ್ಷತೆಯಿಂದ ಉಪಯೋಗಿಸಿ ಭ್ರಷ್ಟಾಚಾರವನ್ನು ತಡೆಗಟ್ಟುವಲ್ಲಿ ವೆಂಕಟಾಚಲರವರ ಕೊಡುಗೆ ಅಪಾರ. ಈ ದುಃಖ ಭರಿಸುವ ಶಕ್ತಿ ಭಗವಂತ ಅವರ ಕುಟುಂಬಕ್ಕೆ ಕರುಣಿಸಲಿ’ ಎಂದು ಮಾಜಿ ಪ್ರಧಾನಿ ದೇವೇಗೌಡ ಪ್ರಾರ್ಥಿಸಿದ್ದಾರೆ.







