ಏರುತ್ತಿರುವ ಸಮುದ್ರ ಮಟ್ಟ: 2050ರೊಳಗೆ ನೀರಿನಲ್ಲಿ ಕೊಚ್ಚಿ ಹೋಗಲಿದೆ ಭಾರತದ ಈ ಮಹಾನಗರಿ!

ಹೊಸದಿಲ್ಲಿ, ಅ.30: ಹವಾಮಾನ ಬದಲಾವಣೆಯಿಂದಾಗಿ ಏರುತ್ತಿರುವ ಸಮುದ್ರ ಮಟ್ಟದಿಂದಾಗಿ 2050ರೊಳಗಾಗಿ ಮುಂಬೈ ಸಹಿತ ಜಗತ್ತಿನ ಖ್ಯಾತ ಕರಾವಳಿ ನಗರಗಳು ಅಸ್ತಿತ್ವ ಕಳೆದುಕೊಳ್ಳಬಹುದು ಹಾಗೂ ಈ ಹಿಂದೆ ಅಂದಾಜಿಸಿದ್ದಕ್ಕಿಂತ ಮೂರು ಪಟ್ಟು ಅಧಿಕ ಜನರನ್ನು ಈ ಬೆಳವಣಿಗೆ ಬಾಧಿಸಬಹುದು ಎಂದು ಸಂಶೋಧನಾ ವಿವರಗಳು ಬಹಿರಂಗ ಪಡಿಸಿವೆ.
ಈ ಶತಮಾನದ ಮಧ್ಯ ಭಾಗದ ವೇಳೆ ಅಪಾಯದಲ್ಲಿರಬಹುದಾದ ಪ್ರದೇಶದಲ್ಲಿ ಈಗ 15 ಕೋಟಿ ಜನರು ವಾಸವಾಗಿದ್ದಾರೆಂದು ಸಮುದ್ರ ಮಟ್ಟದ ಏರಿಕೆಯ ಕುರಿತಂತೆ ತಿಳಿಯಲು ಹೆಚ್ಚು ನಿಖರ ವಿಧಾನವನ್ನು ಅಭಿವೃದ್ಧಿಪಡಿಸಿರುವ ನ್ಯೂ ಜೆರ್ಸಿ ಮೂಲದ ಕ್ಲೈಮೇಟ್ ಸೆಂಟ್ರಲ್ ಸಂಸ್ಥೆಯ ಸ್ಕಾಟ್ ಎ ಕಲ್ಪ್ ಹಾಗೂ ಬೆಂಜಮಿನ್ ಎಚ್ ಸ್ಟ್ರಾಸ್ ಅವರ ಸಂಶೋಧನಾ ವರದಿ ತಿಳಿಸಿದೆ.
ಮುಂಬೈನ ಹೆಚ್ಚಿನ ಭಾಗ ಮುಖ್ಯವಾಗಿ ದಕ್ಷಿಣದ ಭಾಗ ಸಮುದ್ರದಲ್ಲಿ ಲೀನವಾಗುವ ಅಪಾಯವಿದೆ ಎಂಬುದನ್ನು ವರದಿಯಲ್ಲಿ ವಿವರಿಸಲಾಗಿದೆ. ಈ ಸಂಶೋಧನೆಯ ಪ್ರಕಾರ ದಕ್ಷಿಣ ವಿಯೆಟ್ನಾಂ ಬಹುತೇಕ ಮಾಯವಾಗಿ 2 ಕೋಟಿ ಜನರನ್ನು ಬಾಧಿಸುವ ಸಾಧ್ಯತೆಯಿದೆ. ಅಂತೆಯೇ ವಿಯೆಟ್ನಾಂನ ಪ್ರಮುಖ ನಗರ ಹೋಚಿಮಿನ್ ಕೂಡ ಸಮುದ್ರ ಮಟ್ಟದ ಏರಿಕೆಯಿಂದ ಬಾಧಿತವಾಗಲಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇವುಗಳ ಹೊರತಾಗಿ ಥಾಯ್ ಲ್ಯಾಂಡ್ ರಾಜಧಾನಿ ಬ್ಯಾಂಕಾಕ್, ಶಾಂಘಾಯ್ ಹಾಗೂ ಸುತ್ತಮುತ್ತಲಿನ ನಗರಗಳು, ಇರಾಕ್ ನ ಬಸ್ರಾ ಹಾಗೂ ಈಜಿಪ್ಟ್‍ನ ಪ್ರಾಚೀನ ನಗರ ಅಲೆಕ್ಸಾಂಡ್ರಿಯಾ ಕೂಡ ಅಪಾಯದಲ್ಲಿವೆ.
ಸಾಮಾನ್ಯವಾಗಿ ಉಪಗ್ರಹಗಳನ್ನು ಬಳಸಿ ಮಾಡಲಾಗುವ ಇಂತಹ ಲೆಕ್ಕಾಚಾರಗಳು ವಾಸ್ತವ ತಳ ಮಟ್ಟವನ್ನು ಮರಗಳು ಹಾಗೂ ಕಟ್ಟಡಗಳೆಡೆಯಿಂದ ಅಂದಾಜಿಸಲು ಕಷ್ಟ ಪಡುವುದರಿಂದ ತಾವು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿ ತಮ್ಮ ವರದಿ ಸಿದ್ಧಪಡಿಸಿದ್ದಾಗಿ ಸ್ಕಾಟ್ ತಿಳಿಸಿದ್ದಾರೆ.







