ಉಡುಪಿ: ನ.1ಕ್ಕೆ ಸಿಎಸ್‌ಐನಿಂದ ಮಕ್ಕಳ ಹಬ್ಬ
ಉಡುಪಿ, ಅ.30: ಸಿಎಸ್‌ಐ ಉಡುಪಿ ವಲಯ ಹಾಗೂ ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್ ಇವುಗಳ ಜಂಟಿ ಆಶ್ರಯದಲ್ಲಿ ಮಕ್ಕಳ ಹಬ್ಬ ‘ದಿ ವರ್ಲ್ಡ್ ಸಂಡೇ ಸ್ಕೂಲ್ ಡೇ’ ನ.1ರಂದು ಬೈಲೂರಿನ ಸಿಎಸ್‌ಐ ಕ್ರಿಸ್ತ ಜ್ಯೋತಿ ಚರ್ಚ್‌ನಲ್ಲಿ ನಡೆಯಲಿದೆ ಎಂದು ಸಿಎಸ್‌ಐ ಉಡುಪಿ ವಲಯ ಅಧ್ಯಕ್ಷ ರೆ.ಇಯಾನ್ ಡಿ.ಸೋನ್ಸ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಡೀ ದಿನ ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗುವುದು ಎಂದರು. ಬೆಳಗ್ಗೆ 9:15ಕ್ಕೆ ಸಿಎಸ್‌ಐ ಕರ್ನಾಟಕದ ಬಿಷಪ್ ಅ.ವಂ. ಮೋಹನ್ ಮನೋರಾಜ್ ಅವರು ದೈವಿಕ ಸಂದೇಶದ ಮೂಲಕ ಕಾರ್ಯಕ್ರುಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಇದಕ್ಕೆ ಮೊದಲು ಮುದ್ದಣ ಎಸ್ಟೇಟ್‌ನಿಂದ ಕ್ರಿಸ್ತ ಜ್ಯೋತಿ ಚರ್ಚ್‌ವರೆಗೆ ಮೆರವಣಿಗೆ ನಡೆಯಲಿದ್ದು, 9:00 ಗಂಟೆಗೆ ಬೈಲೂರು ಮಹಿಷಮರ್ಧಿನಿ ದೇವಸ್ಥಾನದ ಆಡಳಿತ ಟ್ರಸ್ಟಿ ರಮೇಶ್ ಶೆಟ್ಟಿ ಅವರು ಕನ್ನಡ ರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸುವರು ಎಂದರು.
10:30ರ ಬಳಿ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗುವುದು. ಬೈಬಲ್ ಕ್ವಿಝ್ ಸ್ಪರ್ಧೆ, ನೃತ್ಯ ಸ್ಪರ್ಧೆ, ಜೂನಿಯರ್ ಮತ್ತು ಸೀನಿಯರ್ ತುಳು ಬೈಬಲ್ ಓದುವ ಸ್ಪರ್ಧೆ ಹಾಗೂ ಇತರ ಸ್ಪರ್ಧೆಗಳನ್ನು ನಡೆಸಲಾಗುವುದು ಎಂದರು.
ಸಂಜೆ 4:00ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಉಡುಪಿ ಧರ್ಮಪ್ರಾಂತದ ಬಿಷಪ್ ಅ.ವಂ. ಡಾ.ಜೆರಾಲ್ಡ್ ಐಸಾಕ್ ಲೋಬೊ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಬ್ರಹ್ಮಾವರದ ಹಿರಿಯ ಸಬ್ ರಿಜಿಸ್ಟ್ರಾರ್ ಕೀರ್ತಿ ಕುಮಾರಿ, ನಗರಸಭಾ ಸದಸ್ಯ ವಿಜಯ ಪೂಜಾರಿ ಉಪಸ್ಥಿತರಿರುವರು.
ಪತ್ರಿಕಾಗೋಷ್ಠಿಯಲ್ಲಿ ಸಿ.ಜೆ.ಚರ್ಚ್‌ನ ಉಪಾಧ್ಯಕ್ಷ ರೆ.ಅಕ್ಷಯ ಅಮ್ಮಣ್ಣ, ಉಡುಪಿ ವಲಯ ಕಾರ್ಯದರ್ಶಿ ನವೀನ್ ಎಂ.ಪಾಲಣ್ಣ, ಡೋನಾಲ್ಡ್ ಆಂಚನ್, ಸ್ಟಾನ್ಲಿ ಕೋಟ್ಯಾನ್ ಉಪಸ್ಥಿತರಿದ್ದರು.







