ಮುಂಬಯಿ ಪದವೀಧರ ಯಕ್ಷಗಾನ ಸಮಿತಿಗೆ ಯಕ್ಷಗಾನ ಕಲಾರಂಗ ಶ್ರೀವಿಶ್ವೇಶತೀರ್ಥ ಪ್ರಶಸ್ತಿ
ಉಡುಪಿ, ಅ.30: ಯತಿಶ್ರೇಷ್ಟರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರ ಹೆಸರಿ ನಲ್ಲಿ ಉಡುಪಿಯ ಯಕ್ಷಗಾನ ಕಲಾರಂಗ ಪ್ರತಿ ವರ್ಷ 50,000ರೂ. ನಗದು ಪುರಸ್ಕಾರದೊಂದಿಗೆ ನೀಡುವ ಶ್ರೀವಿಶ್ವೇಶತೀರ್ಥ ಪ್ರಶಸ್ತಿಯನ್ನು ವಿಶೇಷ ಸಾಧನೆ ಮಾಡಿದ ಯಕ್ಷಗಾನ ಸಂಘಟನೆಗೆ ನೀಡುತ್ತಿದ್ದು, ಈ ವರ್ಷದ ಪ್ರಶಸ್ತಿಗೆ ಮುಂಬಯಿಯ ಪದವೀಧರ ಯಕ್ಷಗಾನ ಸಮಿತಿ ಆಯ್ಕೆಯಾಗಿದೆ.
ಎಚ್.ಬಿ.ಎಲ್ ರಾವ್ ನೇತೃತ್ವದಲ್ಲಿ 1973ರಲ್ಲಿ ಸ್ಥಾಪನೆಗೊಂಡ ಈ ಸಂಸ್ಥೆ ಮುಂಬಯಿಯಲ್ಲಿ ಐದು ದಶಕಗಳ ಕಾಲಾವಧಿಯಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಯಕ್ಷಗಾನ ಕಲಾರಂಗದ ಪ್ರಕಟಣೆ ತಿಳಿಸಿದೆ. ಯಕ್ಷಗಾನ ಪ್ರದರ್ಶನ, ಸಮ್ಮಾನ, ಸಮ್ಮೇಳನ, ಯಕ್ಷಗಾನ ಪ್ರಸಂಗ ಪ್ರಕಟಣೆಯ ಮೂಲಕ ಸಮಿತಿ, ಹೊರನಾಡಿನಲ್ಲಿದ್ದು ಕರಾವಳಿಯ ಜನಪದ ಕಲೆಯನ್ನು ನಿರಂತರ ಪೋಷಿಸುತ್ತಾ ಬಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭ ನ.17ರ ರವಿವಾರ ಶ್ರೀಕೃಷ್ಣಮಠದ ರಾಜಾಂಗಣ ದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಕೆ. ಗಣೇಶ್ ರಾವ್ ಹಾಗೂ ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಡಾ.ಹರೀಶ್ ಹಂದೆ ಭೇಟಿ: ಸೆಲ್ಕೋ ಸೋಲಾರ್ ಸಂಸ್ಥೆಯ ಸಂಸ್ಥಾಪಕ, ಪ್ರತಿಷ್ಠಿತ ಮ್ಯಾಗ್ಸಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಅವರು ಮಂಗಳವಾರ ಯಕ್ಷಗಾನ ಕಲಾರಂಗ ಕಚೇರಿಗೆ ಭೇಟಿ ನೀಡಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಿದ್ಯಾಪೋಷಕದ 150ಕ್ಕೂ ಮೇಲ್ಪಟ್ಟ ವಿದ್ಯಾರ್ಥಿಗಳ ಮನೆಗೆ ಸೆಲ್ಕೋ ಸಂಸ್ಥೆ ಉಚಿತವಾಗಿ ಸೋಲಾರ್ ಬೆಳಕಿನ ಸೌಲಭ್ಯವನ್ನು ಕಲ್ಪಿಸಿದೆ. ಸಂಸ್ಥೆ ವತಿಯಿಂದ ಡಾ.ಹಂದೆ ಅವರಿಗೆ ಶಾಲು ಹೊದಿಸಿ ಜತೆಕಾರ್ಯದರ್ಶಿ ಪ್ರೊ.ನಾರಾಯಣ ಎಂ. ಹೆಗಡೆ ಗೌರವಿಸಿದರು. ಸೆಲ್ಕೋ ಸಂಸ್ಥೆಯ ಜಿಎಂ ಜಗದೀಶ್ ಪೈ ಹಾಗೂ ಎಜಿಎಂ ಗುರುಪ್ರಕಾಶ್ ಶೆಟ್ಟಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.