ಹೆದ್ದಾರಿ ಅವ್ಯವಸ್ಥೆ ಸರಿಪಡಿಸದೆ ಟೋಲ್ ಸಂಗ್ರಹಿಸಿದರೆ ಸಹಿಸಲ್ಲ: ಶಾಸಕ ಸುಕುಮಾರ್ ಶೆಟ್ಟಿ
'ಶಿರೂರು ಟೋಲ್ ಚಲೋ' ಅಭಿಯಾನಕ್ಕೆ ಉತ್ತಮ ಸ್ಪಂದನೆ

ಕುಂದಾಪುರ, ಉಡುಪಿ, ಅ.30: ಶಿರೂರು ಹೆದ್ದಾರಿ ಹೋರಾಟ ಸಮಿತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಬುಧವಾರ ಶಿರೂರಿನಲ್ಲಿ ನಡೆದ ‘ಶಿರೂರು ಟೋಲ್ ಚಲೋ’ ಅಭಿಯಾನಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಯಿತು.
ಶಿರೂರು ಟೋಲ್ ಕೇಂದ್ರದಲ್ಲಿ ಸ್ಥಳೀಯರಿಗೆ ಶುಲ್ಕ ವಿನಾಯಿತಿ ನೀಡಬೇಕು, ಸರ್ವಿಸ್ ರಸ್ತೆ ಪೂರ್ಣಗೊಳಿಸಬೇಕೆಂಬ ಪ್ರಮುಖ ಬೇಡಿಕೆಗಳೂ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಇಂದು ಬೆಳಿಗ್ಗೆ ಶಿರೂರು ಟೋಲ್ ಕೇಂದ್ರದ ಬಳಿ ಹೆದ್ದಾರಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸ್ಥಳೀಯರು ಶಾಂತಿಯುತ ಪ್ರತಿಭಟನೆ ನಡೆಸಿ ಕೊನೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಸಾರ್ವಜನಿಕರ ಪರವಾಗಿ ಮನವಿ ಸಲ್ಲಿಸಿ ಮಾತನಾಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಐಆರ್‌ಬಿ ಗುತ್ತಿಗೆ ಕಂಪೆನಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿ ಸ್ಥಳದಲ್ಲೇ ಅವರನ್ನು ತರಾಟೆಗೆ ತೆಗೆದುಕೊಂಡರು.
ಬೈಂದೂರು ಕ್ಷೇತ್ರ ಸೇರಿದಂತೆ ಕಾರವಾರದಿಂದ ಕುಂದಾಪುರದವರೆಗೆ ಐಆರ್‌ಬಿ ಕಂಪೆನಿ ಸಂಪೂರ್ಣ ಕಳಪೆ ಕಾಮಗಾರಿ ನಡೆಸುತ್ತಿದೆ. ಅರೆಬರೆ ಕಾಮಗಾರಿಯಿಂದಾಗಿ ಕೆಲವೆಡೆ ಸೂಕ್ತವಾದ ಚರಂಡಿ ಇಲ್ಲದೇ ರಸ್ತೆ ನೀರೆಲ್ಲಾ ಕೃಷಿಗದ್ದೆಗಳಿಗೆ ನುಗ್ಗಿ ಭತ್ತದ ಕೃಷಿ ನಾಶವಾಗಿದೆ. ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯಿಂದಾಗಿ ಕಳೆದ ಕೆಲ ವರ್ಷಗಳಿಂದ ನೂರಾರು ಜನರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದವರು ದೂರಿದರು.
ಇನ್ನಾದರೂ ಗುತ್ತಿಗೆ ಕಂಪೆನಿ ಸಾರ್ವಜನಿಕರ ಬೇಡಿಕೆಗಳಿಗೆ ಸ್ಪಂದಿಸಿ ತ್ವರಿತವಾಗಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕು. ಬಳಿಕ ಟೋಲ್ ಸಂಗ್ರಹ ಆರಂಭಿಸಲಿ. ಇದಕ್ಕೆ ನಮ್ಮ ಆಕ್ಷೇಪವಿಲ್ಲ. ಹೆದ್ದಾರಿ ಅವ್ಯವಸ್ಥೆ ಸರಿಪಡಿಸದೆ ಯಾವುದೇ ಕಾರಣಕ್ಕೂ ಟೋಲ್ ಸಂಗ್ರಹದ ಆರಂಭಕ್ಕೆ ಅವಕಾಶ ನೀಡುವುದಿಲ್ಲ ಎಂದು ಶಾಸಕರು ಐಆರ್‌ಬಿ ಗುತ್ತಿಗೆ ಕಂಪೆನಿಗೆ ಎಚ್ಚರಿಕೆ ನೀಡಿದರು.
ಪಾದಯಾತ್ರೆ ನಡೆಸುತ್ತೇವೆ:ಗೋಪಾಲ ಪೂಜಾರಿ
ಟೋಲ್ ಚಲೋ ಅಭಿಯಾನಕ್ಕೆ ಬೆಂಬಲ ಸೂಚಿಸಿ ಮಾತನಾಡಿದ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ, ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಸಂಪೂರ್ಣ ಅವ್ಯವಸ್ಥೆಯಿಂದ ಕೂಡಿದೆ. ಮಳೆಗಾಲದಲ್ಲಿ ವಾಹನ ಸವಾರರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ಈಗಾಗಲೇ ನಿಗದಿಪಡಿಸಿದ ಸ್ಥಳಗಳಲ್ಲಿ ಸರ್ಕಲ್‌ಗಳನ್ನು, ಡಿವೈಡರ್‌ಗಳನ್ನು ಅಳವಡಿಸದಿರುವುದು ಅಪಘಾತ ಸಂಖ್ಯೆ ಹೆಚ್ಚಲು ಕಾರಣ ವಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಅಗತ್ಯವಾಗಿರುವ ಸರ್ವಿಸ್ ರಸ್ತೆಗಳನ್ನು ಪೂರ್ಣಗೊಳಿಸಿ ಟೋಲ್ ಪ್ರಾರಂಭಿಸಬೇಕು. ಒಂದೊಮ್ಮೆ ಬೇಡಿಕೆ ಈಡೇರಿಸ ದಿದ್ದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ತಲ್ಲೂರಿನಿಂದ ಶಿರೂರಿನವರೆಗೂ ಪಾದಯಾತ್ರೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಶಿರೂರು ಭಾಗದ ಜನರು ವ್ಯಾಪಾರ-ವಹಿವಾಟುಗಳಿಗಾಗಿ ಭಟ್ಕಳಕ್ಕೆ ತೆರಳಬೇಕು. ಕೃಷಿ ಚಟುವಟಿಕೆಗಳಿಗಾಗಿ ತಮ್ಮ ತೋಟ ಹಾಗೂ ಗದ್ದೆಗಳಿಗೂ ತೆರಳಬೇಕಿದ್ದರೂ ಟೋಲ್ ಕಟ್ಟಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಲಿದೆ. ಈ ಎಲ್ಲಾ ಸಮಸ್ಯೆಗಳನ್ನು ಅರಿತು ಸ್ಥಳೀಯರಿಗೆ 10 ಕಿ.ಮಿ ವರೆಗೆ ಯಾವುದೇ ಕಾರಣಕ್ಕೂ ಸುಂಕ ವಸೂಲಿ ಮಾಡಬಾರದು ಎನ್ನುವ ಅಬಿಪ್ರಾಯಗಳು ಸಾರ್ವಜನಿಕ ವಲಯದಿಂದ ಕೇಳಿಬಂತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ನೀಡಲಾಯಿತು. ಮನವಿ ಸ್ವೀಕರಿಸಿ ಮಾತನಾಡಿದ ಎನ್‌ಎಚ್‌ಐ ಅಧಿಕಾರಿ ನವೀನ್, ಸ್ಥಳೀಯರಿಗೆ ನೀಡಿರುವ ಬೇಡಿಕೆಗಳನ್ನು ಈಡೇರಿಸದೇ ಸುಂಕ ತೆಗೆದುಕೊಳ್ಳುವುದಿಲ್ಲ ಎಂದು ಭರವಸೆ ನೀಡಿದರು.
ಈ ವೇಳೆಯಲ್ಲಿ ಟೋಲ್ ಚಲೋ ಅಭಿಯಾನದ ಪ್ರಮುಖರಾದ ಪತ್ರಕರ್ತ ಅರುಣ್ ಕುಮಾರ್ ಶಿರೂರು, ಸತೀಶ್ ಶೆಟ್ಟಿ, ಮಣಿಗಾರ್ ಜಿಫ್ರಿ ಸಾಹೇಬ್, ರಘುರಾಮ ಪೂಜಾರಿ, ಚಂದ್ರಶೇಖರ್ ಶೆಟ್ಟಿ, ಸಿದ್ದಿಕ್ ಸಾಹೇಬ್, ರಘುರಾಮ ಮೇಸ್ತ, ಇಕ್ಬಾಲ್, ಜಿಪಂ ಸದಸ್ಯ ಸುರೇಶ್ ಬಟ್ವಾಡಿ, ಮಾಜಿ ಜಿಪಂ ಅಧ್ಯಕ್ಷ ಎಸ್.ರಾಜು ಪೂಜಾರಿ, ತಾಪಂ ಸದಸ್ಯ ಪುಷ್ಪರಾಜ್ ಶೆಟ್ಟಿ, ಶಿರೂರು ಗ್ರಾಪಂ ಅಧ್ಯಕ್ಷೆ ದಿಲ್‌ಶಾದ್ ಬೇಗಂ, ರಮೇಶ್ ನಾಯ್ಕ ಬೆಳಕೆ, ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಸಾಮಾಜಿಕ ಕಾರ್ಯಕರ್ತ ಸುಬ್ರಹ್ಮಣ್ಯ ಬಿಜೂರು, ರವಿ ಶೆಟ್ಟಿ, ಪ್ರಿಯಾ ಬಿಜೂರು, ವೆಂಕಟೇಶ್ ಕೋಣಿ ಮೊದಲಾದವರು ಉಪಸ್ಥಿತರಿದ್ದರು.
ಕುಂದಾಪುರ ಎಎಸ್‌ಪಿ ಹರಿರಾಮ್ ಶಂಕರ್ ಮಾರ್ಗದರ್ಶನದಲ್ಲಿ ಬೈಂದೂರು ವೃತ್ತ ನಿರೀಕ್ಷಕ ಸುರೇಶ್ ನಾಯ್ಕ, ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್ ನೇತೃತ್ವದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಯಿತು.
ಇನ್ನೇನು ಕೆಲವೇ ತಿಂಗಳುಗಳಲ್ಲಿ ಶಿರೂರು ಟೋಲ್ ಕೇಂದ್ರದಲ್ಲಿ ಸುಂಕ ವಸೂಲಾತಿ ಪ್ರಕ್ರಿಯೆ ಆರಂಭಗೊಳ್ಳುವ ಲಕ್ಷಣಗಳಿವೆ. ಸ್ಥಳೀಯರಿಗೆ 10 ಕಿ.ಮೀ ವರೆಗೂ ಸುಂಕ ವಿನಾಯಿತಿ ಕೊಡಬೇಕು ಎನ್ನುವುದು ನನ್ನ ಆಗ್ರಹವೂ ಹೌದು. ಕಾಮಗಾರಿ ನಡೆಸುವುದು ಜನರಿಗೋಸ್ಕರ ಹೊರತು ಬೇರೆಯವರ ಲಾಭಕ್ಕಾಗಿ ಅಲ್ಲ. ಜನರಿಗೆ ತೊಂದರೆಯಾದರೆ ಪಕ್ಷ ನೋಡಲ್ಲ. ಪಕ್ಷಾತೀತವಾಗಿ, ಜನಹಿತಕ್ಕೋಸ್ಕರ ಹೋರಾಟ ಮಾಡುವುದು ನಮ್ಮ ಧರ್ಮ. ನಮ್ಮನ್ನು ಆಯ್ಕೆ ಮಾಡಿರುವುದು ಜನರ ಕಷ್ಟಗಳಿಗೆ ಸ್ಪಂದಿಸಲು. ಜನರ ಕಷ್ಟಗಳಿಗೆ ಸ್ಪಂದಿಸದಿದ್ದರೆ ನಾವು ಎಂಎಲ್‌ಎಗಳು ಯಾತಕ್ಕೆ? ಗಂಜಿ ಹೊಡೆಯಲಿಕ್ಕಾ?
-ಬಿ.ಎಂ.ಸುಕುಮಾರ್ ಶೆಟ್ಟಿ, ಬೈಂದೂರು ಶಾಸಕ
ನಾನು ಶಾಸಕನಾಗಿದ್ದ ಅವಧಿಯಲ್ಲಿ ಯಡಿಯೂರಪ್ಪ ಸಂಸದರಾಗಿದ್ದರು. ಆ ಸಂದರ್ಭದಲ್ಲಿ ಅವರ ಆಪ್ತ ಸಹಾಯಕರು ಬಂದು ಸಭೆ ನಡೆಸಿ ಹೋಗಿದ್ದರು. ಯಡಿಯೂರಪ್ಪ ಅವರೂ ಸಾಕಷ್ಟು ಹೇಳಿಕೆಗಳನ್ನು ನೀಡಿದ್ದರು. ಆದರೆ ಇದುವರೆಗೂ ಯಾವುದನ್ನೂ ಕಾರ್ಯಗತಗೊಳಿಸಿಲ್ಲ. ಕೇವಲ ಹೇಳಿಕೆಗಳಿಗಷ್ಟೇ ಸೀಮಿತವಾಗಿದೆ. ಬೈಂದೂರು ಕ್ಷೇತ್ರದ ಜನರು ಯಾವುದೇ ತಕರಾರುಗಳಿಲ್ಲದೇ ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಗೆ ತಮ್ಮ ಜಾಗಗಳನ್ನು ಬಿಟ್ಟುಕೊಟ್ಟಿದ್ದಾರೆ. ಜನರಿಗೆ ನ್ಯಾಯ ಕೊಡುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡಬೇಕು. ಬೈಂದೂರು ಕ್ಷೇತ್ರದ ಜನರಿಗೆ ತೊಂದರೆಗಳಾದರೆ ನಾವಂತೂ ಸುಮ್ಮನಿರಲ್ಲ. ಅವ್ಯವಸ್ಥೆಗಳ ವಿರುದ್ದ ಸಿಡಿದೇಳುತ್ತೇವೆ.
-ಕೆ. ಗೋಪಾಲ ಪೂಜಾರಿ, ಮಾಜಿ ಶಾಸಕ ಬೈಂದೂರು.










