ಡಿಸೆಂಬರ್‌ನಲ್ಲಿ ನೂತನ ಕೈಗಾರಿಕಾ ನೀತಿ ಘೋಷಣೆ: ಸಚಿವ ಜಗದೀಶ್ ಶೆಟ್ಟರ್

ಬೆಂಗಳೂರು, ಅ. 30: ನೂತನ ಕೈಗಾರಿಕಾ ನೀತಿ-2020 ಕರಡು ಪ್ರತಿ ಸಿದ್ಧವಾಗಿದ್ದು, ಸಚಿವ ಸಂಪುಟದ ಒಪ್ಪಿಗೆ ಬಳಿಕ ಡಿಸೆಂಬರ್ ತಿಂಗಳಲ್ಲಿ ನೂತನ ನೀತಿಯನ್ನು ಘೋಷಣೆ ಮಾಡಲಾಗುವುದು ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಇಂದಿಲ್ಲಿ ಪ್ರಕಟಿಸಿದ್ದಾರೆ.
ಬುಧವಾರ ನಗರದ ಖನಿಜ ಭವನದಲ್ಲಿನ ಉದ್ಯೋಗ ಮಿತ್ರ ಕಚೇರಿಯಲ್ಲಿ ಸುದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೀನಾ ದೇಶದ 8 ವಿವಿಧ ಕೈಗಾರಿಕೆಯ ಪ್ರತಿನಿಧಿಗಳು ಕರ್ನಾಟಕದ ವಿವಿಧ ವಲಯದಲ್ಲಿ ಬಂಡವಾಳ ಹೂಡಿಕೆ ಮಾಡುವ ಸಂಬಂಧ ಸಮಾಲೋಚನೆ ನಡೆಸಿದರು.
ನೂತನ ನೀತಿ ಘೋಷಣೆವರೆಗೂ ಹಳೆಯ ನೀತಿ ಚಾಲ್ತಿಯಲ್ಲಿ ಇರಲಿದೆ. ಹೊಸ ನೀತಿ ಸಿದ್ಧತೆ ನಡೆಯುತ್ತಿದ್ದು, ಕರಡು ಪ್ರತಿ ಸಿದ್ಧವಾಗಿದೆ. ಒಂದೆರಡು ಸಭೆ ಬಳಿಕ ಸಂಪುಟದ ಮುಂದೆ ಮಂಡಿಸಿ ಡಿಸೆಂಬರ್ ತಿಂಗಳಲ್ಲಿ ನೂತನ ನೀತಿಯನ್ನು ಘೋಷಿಸಲಾಗುತ್ತದೆ. ಕರಡು ಪ್ರತಿ ಸಿದ್ಧತೆ ವೇಳೆ ಇತರೆ ರಾಜ್ಯಗಳ ಕೈಗಾರಿಕಾ ನೀತಿಯನ್ನು ಅಧ್ಯಯನ ನಡೆಸಿದ್ದೇವೆ. ಒಟ್ಟಾರೆ ಉತ್ತಮ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಿದ್ದೇವೆ ಎಂದು ಹೇಳಿದರು.
ಚೀನಾ ದೇಶದ ವಿವಿಧ ವಲಯದ ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿದ್ದಾರೆ. 8 ಕಂಪೆನಿಯ ಉದ್ಯಮಿಗಳು ಇಂದು ಚರ್ಚಿಸಿದ್ದಾರೆ. ಕರ್ನಾಟಕದಲ್ಲಿ ಹೂಡಿಕೆ ಮಾಡಲು ಇರುವ ವಾತಾವರಣದ ಬಗ್ಗೆ ಮಾಹಿತಿ ಪಡೆದರು. ಭೂ ಖರೀದಿ, ವಿದ್ಯುತ್, ನೀರು ಸೇರಿದಂತೆ ಇತರೆ ಮೂಲ ಸೌಕರ್ಯದ ಬಗ್ಗೆ ಮಾಹಿತಿ ಪಡೆದು ಆಸಕ್ತಿ ತೋರಿದ್ದಾರೆ. ಈ ಮೂಲಕ ವಿದೇಶಿ ಹೂಡಿಕೆ ಆಗುವ ಭರವಸೆ ಇದೆ ಎಂದು ವಿವರಿಸಿದರು.
ಕೈಗಾರಿಕೆ ಅಭಿವೃದ್ಧಿಯಲ್ಲಿ ಬೆಂಗಳೂರು ಕೇಂದ್ರವಾಗಿ ಮಾರ್ಪಟ್ಟಿದೆ. ಹೀಗಾಗಿ ಬೆಂಗಳೂರನ್ನು ಟೂ ಟಯರ್ ಸಿಟಿಯಾಗಿ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಜೊತೆಗೆ ಕೈಗಾರಿಕೆಯನ್ನು ಇತರೆ ಜಿಲ್ಲೆಗಳಿಗೆ ವಿಸ್ತರಿಸಬೇಕೆಂಬ ನಿಟ್ಟಿನಲ್ಲಿ ಪ್ರಾದೇಶಿಕ ಕೈಗಾರಿಕಾ ಅಭಿವೃದ್ಧಿ ಪ್ರಾಧಿಕಾರ ನಿರ್ಮಾಣಕ್ಕೆ ಚಿಂತಿಸಲಾಗಿದೆ. ಹಿಂದುಳಿದ ಪ್ರದೇಶದಲ್ಲಿ ಈ ಪ್ರಾಧಿಕಾರ ಅಸ್ತಿತ್ವಕ್ಕೆ ತಂದು ಕೈಗಾರಿಕಾ ಅಭಿವೃದ್ಧಿಗೆ ಪ್ರೋತ್ಸಾಹ ನೀಡಲಾಗುವುದು ಎಂದರು.
ಆರ್ಥಿಕ ಹಿಂಜರಿಕೆಯಿಂದ ಆಟೋ ಮೊಬೈಲ್, ರಿಯಲ್ ಎಸ್ಟೇಟ್‌ನಂಥ ಕೆಲವೇ ಕೆಲವು ವಲಯಕ್ಕೆ ತೊಂದರೆಯಾಗಿದೆ. ಇದನ್ನು ಹೊರತುಪಡಿಸಿ ಹೂಡಿಕೆಗೆ ಯಾವುದೇ ರೀತಿಯ ಹೊಡೆತ ಬಿದ್ದಿಲ್ಲ ಎಂದು ತಿಳಿಸಿದರು. ಜಾಗತಿಕ ಬಂಡವಾಳ ಹೂಡಿಕೆ (ಜಿಮ್)ಯನ್ನು ಯಾವ ಅವಧಿಯಲ್ಲಿ ಮಾಡಬೇಕು ಎಂಬುದರ ಬಗ್ಗೆ ಸಿಎಂ ಜತೆಗೆ ಚರ್ಚಿಸಲಿದ್ದೇನೆ. ಬಳಿಕ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದರು.
ಶಾಂಗೈ ಎಂಜಿ ಸ್ಟೇಷನರಿ ಚೇರ್ಮನ್ ಚೆನ್ ಹುವೆನ್ ಸೇರಿದಂತೆ 8 ವಿವಿಧ ವಲಯಗಳ ಕಂಪೆನಿಯ 18 ಚೀನಾ ದೇಶದ ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡು ಚರ್ಚಿಸಿದರು. ಸಭೆಯಲ್ಲಿ ವಾಣಿಜ್ಯ-ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ, ಕೈಗಾರಿಕಾಭಿವೃದ್ಧಿ ಆಯುಕ್ತೆ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.