ವಿಧಾನಸೌಧದ ಮುಂಭಾಗ ಒಡೆಯರ್ ಪ್ರತಿಮೆ ಪ್ರತಿಷ್ಠಾಪನೆಗೆ ಆಗ್ರಹಿಸಿ ಸಹಿ ಸಂಗ್ರಹ ಅಭಿಯಾನ

ಬೆಂಗಳೂರು, ಅ.30: ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಪ್ರತಿಷ್ಠಾಪಿಸಬೇಕೆಂದು ಆಗ್ರಹಿಸಿ ಕರ್ನಾಟಕ ಜನಪರ ವೇದಿಕೆ ಸದಸ್ಯರು ಪುರಭವನದ ಬಳಿ ಸಹಿ ಸಂಗ್ರಹ ಅಭಿಯಾನ ನಡೆಸಿದರು.
ಈ ವೇಳೆ ಮಾತನಾಡಿದ ವೇದಿಕೆ ರಾಜ್ಯಾಧ್ಯಕ್ಷ ರಮೇಶ್‌ಗೌಡ, ಸ್ಥಳೀಯ ಸಂಸ್ಥೆಗಳನ್ನು ರಚಿಸಿ ಆಡಳಿತ ವಿಕೇಂದ್ರಿಕರಣಕ್ಕೆ ಅನುವು ಮಾಡಿಕೊಟ್ಟ ದಿಟ್ಟ ನಾಯಕರಾಗಿದ್ದು, ನಗರ ಪಾಲಿಕೆಗಳನ್ನು ಜಾರಿಗೆ ತಂದು ಗ್ರಾಮ ನೈರ್ಮಲೀಕರಣ, ವೈದ್ಯಕೀಯ, ನೀರಿನ ಸೌಲಭ್ಯ ಸೇರಿ ಮುಂತಾದ ಅಭಿವೃದ್ಧಿ ಕಾರ್ಯಗಳನ್ನು ಜಾರಿಗೆ ತಂದ ಕೀರ್ತಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಲ್ಲುತ್ತದೆ. 1900ರಲ್ಲಿ ಶಿವನಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರ, 1907ರಲ್ಲಿ ಚಿತ್ರದುರ್ಗದಲ್ಲಿ ವಾಣಿವಿಲಾಸ ಸಾಗರ ಅಣೆಕಟ್ಟು, 1911ರಲ್ಲಿ ಮಂಡ್ಯದಲ್ಲಿ ಕೃಷ್ಣರಾಜ ಸಾಗರ ಅಣೆಕಟ್ಟು, 1915ರಲ್ಲಿ ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು, 1916ರಲ್ಲಿ ಮೈಸೂರು ವಿಶ್ವವಿದ್ಯಾಲಯ ಸ್ಥಾಪಿಸಿ ರಾಜ್ಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ ಎಂದು ತಿಳಿಸಿದರು.
ಸಾಬೂನು, ಎಣ್ಣೆ ಕಾರ್ಖಾನೆ, ಮೈಸೂರು ಲ್ಯಾಂಪ್ ಕಾರ್ಖಾನೆ, ನಾಲ್ವಡಿ ಕೃಷ್ಣರಾಜೇಂದ್ರ ಆಸ್ಪತ್ರೆ, ರೇಷ್ಮೆ ನೇಯ್ಗೆ ಕಾರ್ಖಾನೆ, ಚಾಮರಾಜೇಂದ್ರ ಟೆಕ್ನಿಕಲ್ ಕಾಲೇಜು, ಮೈಸೂರು ಮೆಡಿಕಲ್ ಕಾಲೇಜು, ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ಸೇರಿದಂತೆ ವಿವಿಧ ಕಾಲೇಜು ಮತ್ತು ಕಾರ್ಖಾನೆಗಳನ್ನು ತೆರೆದು ಶಿಕ್ಷಣ, ಉದ್ಯೋಗ ನೀಡಿದ್ದಾರೆ. ಇಂತಹ ಧೀಮಂತ ವ್ಯಕ್ತಿಯ ಪ್ರತಿಮೆಯನ್ನು ವಿಧಾನಸೌಧದ ಮುಂಭಾಗ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ ಉಮೇಶ್ ಪಾಟೀಲ್ ನಿರ್ದೇಶನದ ಮಂಡ್ಯದ ಜನದನಿ ಸಂಸ್ಥೆಯ ಕಲಾವಿದರಿಂದ ‘ಸಿರಿಗೆ ಸೆರೆ’ ನಾಟಕ ಪ್ರದರ್ಶಿಸಲಾಯಿತು. ಸಹಿ ಸಂಗ್ರಹ ಅಭಿಯಾನದಲ್ಲಿ ರಾಜ್ಯ ಯುವಘಟಕದ ಅಧ್ಯಕ್ಷ ಸಿಂಹಶ್ರೀನಿವಾಸ, ರಾಜ್ಯ ಸಂಘಟನಾ ಕಾರ್ಯದರ್ಶಿ ಕುಮಾರಗೌಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.