ಪವಿತ್ರ ಆರ್ಥಿಕತೆ ಎಂದರೆ ವೈದಿಕ, ಬ್ರಾಹ್ಮಣ್ಯ ಎಂಬ ತಪ್ಪು ಗ್ರಹಿಕೆ ಬೇಡ: ಹಿರಿಯ ರಂಗಕರ್ಮಿ ಪ್ರಸನ್ನ

ಮೈಸೂರು,ಅ.30: ಪವಿತ್ರ ಆರ್ಥಿಕತೆಗಾಗಿ ಮಾಡುತ್ತಿರುವ ಸತ್ಯಾಗ್ರಹ ಶೂದ್ರರನ್ನು ವೈದಿಕ ಪರಂಪರೆಗೆ ಕೊಂಡೊಯ್ಯುವ ಚಳುವಳಿಯಾಗುವುದಿಲ್ಲ ಎಂದು ಹಿರಿಯ ರಂಗಕರ್ಮಿ ಪ್ರಸನ್ನ ಹೆಗ್ಗೂಡು ಸ್ಪಷ್ಟಪಡಿಸಿದರು.
ನಗರದ ನೃಪತುಂಗ ಕನ್ನಡ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಪವಿತ್ರ ಆರ್ಥಿಕತೆ ಸತ್ಯಾಗ್ರಹದ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಪವಿತ್ರ ಆರ್ಥಿಕತೆ ಎಂದರೆ ವೈದಿಕ, ಬ್ರಾಹ್ಮಣ್ಯ ಎಂಬ ತಪ್ಪು ಗ್ರಹಿಕೆ ಬೇಡ, ಪವಿತ್ರ ಎಂದರೆ ಮುಂದುವರೆಯುವುದು ಎಂದು ಅರ್ಥ. ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಇಂದಿನ ಆರ್ಥಿಕತೆ ಸಂಯಮ ಇಲ್ಲದ ಕ್ಷೇತ್ರವಾಗಿ ಬಿಟ್ಟಿದೆ. ಸ್ವಾತಂತ್ರ್ಯ ಬಂದು 70 ವರ್ಷಗಳು ಕಳೆದರೂ ಮುಂದುವರೆಯಬೇಕಿದ್ದ ಜಿಡಿಪಿ ಕುಸಿದು ಬೀಳುತ್ತಿದೆ. ಇದಕ್ಕೆ ಅವೈಜ್ಞಾನಿಕ ಆರ್ಥಿಕ ನೀತಿಗಳೇ ಕಾರಣ ಎಂದು ಹೇಳಿದರು.
ಈ ಹಿಂದೆ ಶೇ.40 ರಷ್ಟು ಜನರಲ್ಲಿ ಶೇ.60ರಷ್ಟು ಶ್ರೀಮಂತಿಕೆಯಿತ್ತು, ಆದರೆ ಈಗ ಶೇ.1 ರಷ್ಟು ಜನರಲ್ಲಿ ಶೇ.70 ರಷ್ಟು ಶ್ರೀಮಂತಿಕೆ ಇದೆ. ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಂದರ್ಭದಲ್ಲಿ ದೇಶದ ಹಲವಾರು ಕೈಗಾರಿಕೆಗಳು ಮುಚ್ಚುತ್ತಿವೆ. ಹಳ್ಳಿಗಳಲ್ಲಿನ ರೈತರ ಬದುಕು ಮೂರಾಬಟ್ಟೆಯಾಗಿದೆ. ಇದಕ್ಕೆ ಕಾರಣ ನಮ್ಮಲ್ಲಿರುವ ಸಂಪನ್ಮೂಲಗಳು ಮತ್ತು ಆರ್ಥಿಕ ಪರಿಸ್ಥಿತಿ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಜವಾಬ್ದಾರಿಯಾಗಿ ನಡೆದುಕೊಳ್ಳುವ ಬದಲು ಕೇವಲ, ಅಂಬಾನಿ ಅದಾನಿ ಅವರ 1.5 ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತದೆ. ಮಧ್ಯದ ದೊರೆಗಳ 2 ಲಕ್ಷ ಕೋಟಿ ಸಾಲ ಮನ್ನಾ ಮಾಡುತ್ತದೆ. ಇದರ ಶೇ.10 ರಷ್ಟು ಕಾರ್ಮಿಕ ವಲಯ ಮತ್ತು ರೈತರಿಗೆ ನೀಡಿದ್ದರೆ ನಮ್ಮಲ್ಲಿರುವ ಆರ್ಥಿಕತೆ ಉತ್ಕೃಷ್ಟಗೊಳ್ಳುತ್ತಿತ್ತು ಎಂದು ಹೇಳಿದರು.
ನಾವು ಯಾವುದೇ ಹೋರಾಟ ಮಾಡಿದರೂ ಶ್ರಮಜೀವಿಗಳನ್ನು ಪವಿತ್ರಗೊಳಸಿ ನಂತರ ಹೋರಾಟ ಮಾಡಬೇಕು. ಶ್ರಮಜೀವಿಗಳಿಗೆ ಆರ್ಥಿಕ ಶಕ್ತಿ ತುಂಬಿದಾಗ ಚಳುವಳಿಗೆ ಒಂದು ಶಕ್ತಿ ಬರುತ್ತದೆ. ಹಾಗಾಗಿ ಬಸವಣ್ಣ, ಕಬೀರರು ಹೇಳಿದ ಹಾಗೆ ಕಾಯಕವೇ ಕೈಲಾಸ ಎಂದಾಗಬೇಕು ಎಂದು ಹೇಳಿದರು.
ಪವಿತ್ರ ಆರ್ಥಿಕತೆಗಾಗಿ ನಡೆಸುತ್ತಿರುವ ಹೋರಾಟದ ಹಿನ್ನಲೆಯಲ್ಲಿ ರಾಜ್ಯದ ಎಲ್ಲಾ ಭಾಗಗಳಲ್ಲೂ ಜನರ ಅಭಿಪ್ರಾಯವನ್ನು ಸಂಗ್ರಹಿಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದರು.
ಸಮಾವೇಶದಲ್ಲಿ ಜನರ ಅಭಿಪ್ರಾಯ ಸಂಗ್ರಹಿಸಲಾಯಿತು. ಕಾರ್ಯಕ್ರಮದಲ್ಲಿ ಮಾಜಿ ಮೇಜರ್ ಜನರಲ್ ಒಂಬತ್ಕರೆ, ಸಮಾಜವಾದಿ ಚಿಂತಕ ಪ.ಮಲ್ಲೇಶ್, ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ರಂಗಾಯಣದ ಮಾಜಿ ನಿರ್ದೇಶಕ ಜನಾರ್ಧನ್ (ಜನ್ನಿ), ಭಾಗೀತಿ ಬಾಯಿ ಕದಂ, ಚಂದ್ರಶೇಖರ ಐಜೂರು, ಕೈಲಾಶ್ ಕುಮಾರ್, ಪ್ರಾಧ್ಯಾಪಕ ಶಿವಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.
ದೇಶ ಕೈಗೊಳ್ಳುತ್ತಿರುವ ಆರ್.ಸಿ.ಇ.ಪಿ ಒಪ್ಪಂದವನ್ನು ತಡೆಯಲು ನಾವೆಲ್ಲೂ ಹೋರಾಟ ಮಾಡಬೇಕು. ಇಲ್ಲದಿದ್ದರೆ ಈಗ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮುಂದೆ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುವ ಸಂಭವವಿದೆ.
-ಒಂಬತ್ಕರೆ, ಮಾಜಿ ಮೇಜರ್ ಜನರಲ್
ರಾಜಕಾರಣಿಗಳ ಮಾತನ್ನು ನಂಬಬಾರದು, ಅವರು ಹೋರಾಟಕ್ಕೆ ಬರುತ್ತೇನೆ ಎಂದರೆ ಅವರನ್ನು ಸೇರಿಸಿಕೊಳ್ಳಬಾರದು. ಅವರಲ್ಲಿ ಸ್ವಾರ್ಥ ಮತ್ತು ಮೋಸ ಅಡಗಿದೆ.
-ಪ.ಮಲ್ಲೇಶ್, ಸಮಾಜವಾದಿ ಚಿಂತಕ







