ರೈತರ ಸಾಲ ಪ್ರಕ್ರಿಯೆಗೆ ಬ್ಯಾಂಕ್ ಗಳು ಚಾಲನೆ ನೀಡಬೇಕು: ನಿರ್ಮಲಾ ಸೀತಾರಾಮನ್
ಬೆಂಗಳೂರು: ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಅಂತರ್ ರಾಷ್ಟ್ರೀಯ ಸಮ್ಮೇಳನ

ಬೆಂಗಳೂರು, ಅ.30: ಪ್ರವಾಹ ಪೀಡಿತ ಪ್ರದೇಶಗಳಲ್ಲಿನ ರೈತರು, ಕೃಷಿ ಚಟುವಟಿಕೆಗಳಲ್ಲಿ ಸಕ್ರಿಯವಾಗಲು ಸಾಲ ನೀಡುವ ಪ್ರಕ್ರಿಯೆಗೆ ಬ್ಯಾಂಕ್ ಗಳು ಚಾಲನೆ ನೀಡಬೇಕು ಎಂದು ಕೇಂದ್ರದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸೂಚಿಸಿದರು.
ಬುಧವಾರ ದೇವನಹಳ್ಳಿಯ ಕ್ಲಾರ್ಕ್ಸ್ ಎಕ್ಸೋಟಿಕಾ ಕನ್ವೆನ್ಷನ್ ರೆಸಾರ್ಟ್ ನಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ವತಿಯಿಂದ ಆಯೋಜಿಸಿದ್ದ, ಬಡತನ ನಿವಾರಣೆ ಹಾಗೂ ಗ್ರಾಮೀಣಾಭಿವೃದ್ಧಿಯಲ್ಲಿ ತೊಡಗಿಕೊಂಡಿರುವ ರಾಷ್ಟ್ರೀಯ ಹಾಗೂ ಅಂತರ್ ರಾಷ್ಟ್ರೀಯ ಸಂಸ್ಥೆಗಳ ಜೊತೆಯಲ್ಲಿ ಚರ್ಚೆ ಮತ್ತು ಅಂತರ್ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ವ್ಯಾಪ್ತಿಯಲ್ಲಿನ ಅನೇಕ ಪ್ರದೇಶದಲ್ಲಿ ಬರ, ಭೀಕರ ಮಳೆ, ಪ್ರವಾಹ ಉಂಟಾಗಿ, ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟವಾಗಿದೆ. ಆದರೆ, ರೈತರ ಬಳಿ ಬರೀ ಮಣ್ಣು ಉಳಿದಿದ್ದು, ಈ ಮಣ್ಣು ಸದ್ಯ ಫಲವತ್ತತೆಯನ್ನು ಹೊಂದಿದೆ. ಇದನ್ನು ಬ್ಯಾಂಕುಗಳು ಗಂಭೀರವಾಗಿ ಪರಿಗಣಿಸಿ, ರೈತರಿಗೆ ಮರು ಸಾಲ ನೀಡುವ ಮೂಲಕ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದರು.
ಪ್ರವಾಹ ಪೀಡಿತ ಪ್ರದೇಶ, ಗ್ರಾಮಾಂತರ ಭಾಗಗಳಲ್ಲಿ ಬ್ಯಾಂಕ್ ಗಳು ಅಗತ್ಯಕ್ಕೆ ತಕ್ಕಂತೆ ಸಾಲ ನೀಡಬೇಕು. ಅದೇ ರೀತಿ, ಸಾಲ ನೀಡಿದ ಹಣವನ್ನು ವಾಪಸ್ಸು ಪಡೆಯುವ ಪ್ರಕ್ರಿಯೆಯೂ ಜರುಗಬೇಕು. ಜೊತೆಗೆ, ಹಳ್ಳಿಗಳ ಕಡೆ, ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುವಂತೆ ಆಗಲಿ ಎಂದು ಸಲಹೆ ನೀಡಿದರು.
ಮಹಿಳಾ ಸಬಲೀಕರಣದಲ್ಲಿ ಕರ್ನಾಟಕ ಅಗ್ರಗಣ್ಯ ಸ್ಥಾನದಲ್ಲಿದೆ. ಬ್ಯಾಂಕುಗಳ ವ್ಯವಹಾರದ ಬಗ್ಗೆ ಪರಿಚಯವೇ ಇಲ್ಲದ ಮಹಿಳೆಯರು ಕೂಡ ಆರ್ಥಿಕ ಚಟುವಟಿಕೆಗಳನ್ನು ಯಾವುದೇ ಅಳುಕಿಲ್ಲದೆ ನಡೆಸುವ ವಾತಾವರಣ ಸ್ವಸಹಾಯ ಸಂಘಗಳು ಸೃಷ್ಟಿಸಿವೆ ಎಂದು ಹೇಳಿದರು.
ಸಾಮಾಜಿಕ ಮತ್ತು ಆಧ್ಯಾತ್ಮಿಕ ನಾಯಕರು ಆರ್ಥಿಕ ಬದಲಾವಣೆ ತರುವ ನೇತೃತ್ವ ವಹಿಸುತ್ತಿದ್ದಾರೆ. ಇದಕ್ಕೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರೇ ಸಾಕ್ಷಿ ಎಂದ ಅವರು, ಲಾಭಯುತ ಆದಾಯವನ್ನು ಒದಗಿಸುವ ಮೂಲಕ ಬಡತನದ ತೀವ್ರತೆಯನ್ನು ಕಡಿಮೆಗೊಳಿಸಿ, ಸಮುದಾಯದ ಸಂಸ್ಥೆಗಳ ಮೂಲಕ ಸ್ವ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ, ಗ್ರಾಮೀಣ ಜನರ ಜೀವನಮಟ್ಟದಲ್ಲಿ ಅಭಿವೃದ್ಧಿಯನ್ನು ಕಾಣುವ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಿಂದ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆ ಆಗುವ ವಿಶ್ವಾಸವಿದೆ ಎಂದು ಪ್ರಶಂಸಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಕೇವಲ ಧಾರ್ಮಿಕ ಕ್ಷೇತ್ರವಲ್ಲದೆ, ಶಿಕ್ಷಣ,ಆರೋಗ್ಯ, ಯೋಗ ಸೇರಿದಂತೆ ಹಲವು ಯೋಜನೆಗಳ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದೆ. ಲಕ್ಷಾಂತರ ಕುಟುಂಬಗಳ ಆರ್ಥಿಕ ಸುಧಾರಣೆಗೆ ನೆರವಾಗಿದೆ ಎಂದರು.
ರಾಜ್ಯ ಸರಕಾರದಿಂದ ಈ ಹಿಂದೆ ಆರಂಭಿಸಲಾಗಿರುವ ಸ್ವಸಹಾಯ ಸಂಘಗಳ ಕಾರ್ಯವೂ ನಡೆಯುತ್ತಿದ್ದು, 9.5 ಲಕ್ಷ ಗುಂಪುಗಳಿವೆ. ಇದು ವಿಶ್ವದಲ್ಲೆ ಅತಿ ದೊಡ್ಡ ಜಾಲವಾಗಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಸಂಭವಿಸಿದ ಪ್ರವಾಹ ಸಂದರ್ಭದಲ್ಲಿ ಧರ್ಮಸ್ಥಳ ಕ್ಷೇತ್ರ ನೀಡಿದ ನೆರವನ್ನೂ ಸ್ಮರಿಸುತ್ತೇವೆ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಚಿಕಾಗೋ ರಿಸಲ್ಟ್ಸ್ ಶಿಕ್ಷಣ ನಿಧಿಯ ಹಿರಿಯ ಸಂಶೋಧಕ ಡಾ.ಲ್ಯಾರಿ ರೀಡ್, ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ, ಎಸ್‌ಕೆಡಿಆರ್‌ಡಿಪಿ ಜ್ಞಾನವಿಕಾಸ ಕಾರ್ಯಕ್ರಮ ಅಧ್ಯಕ್ಷೆ ಹೇಮಾವತಿ ವಿ.ಹೆಗ್ಗಡೆ, ಎಲ್‌ಐಸಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಡಿ. ಸುಶೀಲ್ ಕುಮಾರ್, ಸಿಂಡಿಕೇಟ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ, ಬ್ಯಾಂಕ್ ಆಫ್ ಬರೋಡಾ ಕಾರ್ಯನಿರ್ವಾಹಕ ನಿರ್ದೇಶಕ ಮುರಳಿ ರಾಮಸ್ವಾಮಿ, ಸೆಲ್ಕೊ ಸಂಸ್ಥೆಯ ಡಾ. ಹರೀಶ್ ಹಂದೆ, ನಬಾರ್ಡ್‌ನ ಸೂರ್ಯ ಕುಮಾರ್, ಡಾ.ಎಲ್.ಎಚ್.ಮಂಜುನಾಥ್ ಸೇರಿದಂತೆ ಪ್ರಮುಖರಿದ್ದರು.
'ರೈತರು ಉತ್ತಮ ಬೆಲೆ ಪಡೆಯಬೇಕು'
ಉತ್ಪನ್ನಗಳ ಮೌಲ್ಯವರ್ಧನೆ ಮೂಲಕ ರೈತರು ಉತ್ತಮ ಬೆಲೆ ಪಡೆಯಬೇಕು. ಆ ಮೂಲಕ ಸಬಲರಾಗಬೇಕು ಎಂದು ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಬೆಳೆಗೆ ಸೂಕ್ತ ಬೆಲೆ ನೀಡುವಂತೆ ರೈತರು ಸರ್ಕಾರದಲ್ಲಿ ಬೇಡಿಕೆ ಇಡುವುದು ಸಾಮಾನ್ಯ. ಆದರೆ ಬೆಳೆಯ ಮೌಲ್ಯವರ್ಧನೆ ಮಾಡಿ ಮಾರುಕಟ್ಟೆ ಮಾಡುವ ಮೂಲಕ ಸಬಲರಾಗಲು ರೈತರು ಚಿಂತನೆ ನಡೆಸಬೇಕು. 40 ವರ್ಷದ ಹಿಂದೆ ಆರಂಭಿಸಿದ ಸಾಮಾಜಿಕ ಸೇವಾ ಚಟುವಟಿಕೆಗಳು ಸಮಾಜದ ಅನೇಕ ಸಮಸ್ಯೆಗಳಿಗೆ ಸ್ಪಂದಿಸುತ್ತಿದೆ. ಸಮಸ್ಯೆಗಳಿಂದ ಉದ್ಭವವಾದ ಅವಕಾಶಗಳಿಂದ ಭಾರತ ಅಭಿವೃದ್ಧಿಯಾಗಿದೆಯೇ ವಿನಃ ಹೊರಗಿನ ಹೂಡಿಕೆಗಳಿಂದಲ್ಲ. ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಜನರನ್ನು ಸಬಲೀಕರಣ ಮಾಡುವುದೇ ಮುಖ್ಯ ಎಂದು ಕರೆ ನೀಡಿದರು.