ತೆರಿಗೆ ವಂಚನೆಯಿಂದ ಬಿಬಿಎಂಪಿ ಬೊಕ್ಕಸಕ್ಕೆ 70 ಕೋಟಿ ರೂ.ನಷ್ಟ !?
ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಶಾಮೀಲು: ಆರೋಪ
ಬೆಂಗಳೂರು, ಅ.30: ಬಿಬಿಎಂಪಿ ಕಂದಾಯ ವಿಭಾಗದಲ್ಲಿ ಬೃಹತ್ ಗೋಲ್‌ಮಾಲ್ ನಡೆದಿದೆ. ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರು ಬಿಬಿಎಂಪಿ ಬೊಕ್ಕಸಕ್ಕೆ ಸುಮಾರು 70 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ವಿರೋಧ ಪಕ್ಷದ ಮಾಜಿ ನಾಯಕ ಪದ್ಮನಾಭರೆಡ್ಡಿ ಆರೋಪ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯ ಕೆಲವು ಕಟ್ಟಡಗಳ ಮಾಲಕರು ತಪ್ಪು ಮಾಹಿತಿ ನೀಡಿದ್ದಾರೆ ಎಂಬ ಆರೋಪದಡಿ ಟೋಟಲ್ ಸ್ಟೇಷನ್ ಸರ್ವೇಯಡಿ ತಪ್ಪು ಮಾಹಿತಿ ಪತ್ತೆ ಹಚ್ಚಲು ಕ್ರಮ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.
ಅದರಂತೆ ಪೂರ್ವ ವಲಯದ ಹಲವಾರು ವಾಣಿಜ್ಯ ಕಟ್ಟಡಗಳನ್ನು ಪರಿಶೀಲಿಸಿದಾಗ ಕೋಟ್ಯಂತರ ರೂ. ಸುಳ್ಳು ಲೆಕ್ಕ ನೀಡಿ ಆಸ್ತಿ ತೆರಿಗೆ ವಂಚಿಸಿರುವುದು ಕಂಡು ಬಂದಿತ್ತು. ಈ ಮಾಲಕರಿಗೆ ರಿಮ್ಯಾಂಡ್ ನೋಟಿಸ್ ನೀಡಿ ಬಾಕಿ ಉಳಿಸಿಕೊಂಡಿರುವ ಆಸ್ತಿ ತೆರಿಗೆಯನ್ನು ಬಡ್ಡಿ ಸಮೇತ ಕಟ್ಟಲು ಸೂಚಿಸಲಾಗಿತ್ತು. ಆದರೆ, ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರು ತಪ್ಪು ಮಾಹಿತಿ ನೀಡಿರುವ ಕಟ್ಟಡ ಮಾಲಕರ ಜತೆ ಶಾಮೀಲಾಗಿ ಕೆಎಂಸಿ ಕಾಯ್ದೆ ವಿರುದ್ಧವಾಗಿ ಹಲವಾರು ಪ್ರಕರಣಗಳನ್ನು ಅವರ ಪರ ತೀರ್ಪು ನೀಡಿ ಪಾಲಿಕೆ ಬೊಕ್ಕಸಕ್ಕೆ 70 ಕೋಟಿ ರೂ. ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಕುಮಾರಕೃಪಾ ರಸ್ತೆಯ ಅಶೋಕ ಹೋಟೆಲ್, ದೊಮ್ಮಲೂರಿನ ಸಸ್ಕೇನ್ ಟೆಕ್ನಾಲಜಿ, ಎಎಸ್‌ಕೆ ಬ್ರದರ್ ಲಿ., ರಾಯಲ್ ಆರ್ಕೇಡ್ ಹೊಟೇಲ್, ಒಬೆರಾಯ್ ಹೊಟೇಲ್, ಶ್ರೀರಾಮಲೀಲಾ ಡೆವಲಪರ್ಸ್, ಈಸ್ಟ್ ವೆಸ್ಟ್ ಹೊಟೇಲ್, ಸೇರಿದಂತೆ ಹಲವಾರು ಕಟ್ಟಡ ಮಾಲಕರ ಜತೆ ಶಾಮೀಲಾಗಿ ಪಾಲಿಕೆಗೆ ನಷ್ಟ ಉಂಟು ಮಾಡಿದ್ದಾರೆ. ಪಾಲಿಕೆ ಇತಿಹಾಸದಲ್ಲೇ ಜಂಟಿ ಆಯುಕ್ತರೊಬ್ಬರು ನಡೆಸಿರುವ ಬೃಹತ್ ಭ್ರಷ್ಟಾಚಾರ ಪ್ರಕರಣ ಇದಾಗಿದೆ ಎಂದು ತಿಳಿಸಿದರು.
ಪೂರ್ವ ವಲಯದ ಜಂಟಿ ಆಯುಕ್ತ ರವೀಂದ್ರ ಅವರನ್ನು ಕೂಡಲೇ ಮಾತೃ ಇಲಾಖೆಗೆ ವರ್ಗಾಹಿಸಬೇಕು. ಈ ಕುರಿತು ಆಯುಕ್ತರು ರಾಜ್ಯ ಸರಕಾರಕ್ಕೆ ಪತ್ರ ಬರೆಯಬೇಕು. ಈ ಭ್ರಷ್ಟಾಚಾರದ ಕುರಿತು ಸಂಪೂರ್ಣ ತನಿಖೆ ಕೈಗೊಳ್ಳಬೇಕು ಎಂದು ಪದ್ಮನಾಭ ರೆಡ್ಡಿ ಒತ್ತಾಯಿಸಿದರು.