ಕಬ್ಬನ್ ಪಾರ್ಕ್‌ನಲ್ಲಿ ಹೊಸ ಕಟ್ಟಡ ಕಟ್ಟಲು ಹೈಕೋರ್ಟ್ ಅನುಮತಿ

ಬೆಂಗಳೂರು, ಅ.30: ಹೈಕೋರ್ಟ್‌ಗೆ ಸಮೀಪವಿರುವ ಕಬ್ಬನ್ ಪಾರ್ಕ್‌ನಲ್ಲಿ ರಾಜ್ಯ ವಕೀಲರ ಪರಿಷತ್ ಕಟ್ಟಡ ಕೆಡವಿ ಅಲ್ಲಿ ಏಳು ಅಂತಸ್ತಿನ ಹೊಸ ಕಟ್ಟಡ ನಿರ್ಮಾಣ ಮಾಡುವ ರಾಜ್ಯ ಸರಕಾರದ ಪ್ರಸ್ತಾವಕ್ಕೆ ಹೈಕೋರ್ಟ್ ಅನುಮತಿ ನೀಡಿದೆ. ಹಾಲಿ ಕಟ್ಟಡ ಕೆಡವಿ ಹೊಸ ಕಟ್ಟಡ ನಿರ್ಮಿಸಲು ಅವಕಾಶ ಮಾಡಿಕೊಡಬೇಕೆಂದು ಕೋರಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾ.ಪಿ.ಎಸ್.ದಿನೇಶ್‌ಕುಮಾರ್ ಅವರಿದ್ದ ಏಕಸದಸ್ಯ ನ್ಯಾಯಪೀಠ, ಈ ಆದೇಶ ನೀಡಿದೆ.
ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಅವರು, ಪಿಡಬ್ಲೂಡಿ ಪ್ರಮಾಣ ಪತ್ರವನ್ನು ನ್ಯಾಯಪೀಠಕ್ಕೆ ಸಲ್ಲಿಸಿ, ಕಟ್ಟಡ ನಿರ್ಮಾಣಕ್ಕೆ ಅಡ್ಡಿಯಾಗಿರುವ ಯಾವುದೇ ಮರಗಳನ್ನು ಕಡಿಯುವುದಿಲ್ಲ. ಈಗಿರುವ 4,924 ಚದರ ಅಡಿಗಳಷ್ಟು ಪಾಯದ ವಿಸ್ತೀರ್ಣದಲ್ಲೇ ಹೊಸ ಕಟ್ಟಡ ವಿಸ್ತರಣೆ ಮಾಡಲಾಗುತ್ತದೆ ಎಂದು ಪೀಠಕ್ಕೆ ತಿಳಿಸಿದರು.
ರಿಜಿಸ್ಟ್ರಾರ್ ಜನರಲ್ ಪರ ವಕೀಲ ಎಸ್.ಶ್ರೀರಂಗ, ಹೊಸ ಕಟ್ಟಡ ನಿರ್ಮಿಸುವುದರಿಂದ ಕಬ್ಬನ್ ಪಾರ್ಕ್ ಪರಿಸರಕ್ಕೆ ಯಾವುದೇ ಅಪಾಯವಿಲ್ಲ. ಉದ್ದೇಶಿತ ಕಾಮಗಾರಿ ಜಾಗದಲ್ಲಿ ಯಾವುದೇ ಮರಗಳನ್ನು ಕಡಿಯಲಾಗುವುದಿಲ್ಲ ಎಂದು ತಿಳಿಸಿದ್ದಾರೆ.





