ಲಕ್ಷದ್ವೀಪದಲ್ಲಿ ಮುಂದಿನ 24 ಗಂಟೆಗಳಲ್ಲಿ ‘ಮಹಾ’ಚಂಡಮಾರುತ ಸಾಧ್ಯತೆ

ಹೊಸದಿಲ್ಲಿ,ಅ.30: ಅಪರೂಪದ ವಿದ್ಯಮಾನದಲ್ಲಿ ಈಗಾಗಲೇ ಸುಳಿದಾಡುತ್ತಿರುವ ಕ್ಯಾರ್ ಚಂಡಮಾರುತದ ಜೊತೆಗೆ ಅರಬಿ ಸಮುದ್ರದಲ್ಲಿ ಇನ್ನೊಂದು ಚಂಡಮಾರುತವು ರೂಪುಗೊಂಡಿದ್ದು,ಇದನ್ನು ‘ಮಹಾ’ ಎಂದು ಹೆಸರಿಸಲಾಗಿದೆ.
ಮಹಾ ಚಂಡಮಾರುತವು ಪ್ರತಿ ಗಂಟೆಗೆ 100 ಕಿ.ಮೀ.ವೇಗದವರೆಗಿನ ಗಾಳಿಯೊಂದಿಗೆ ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪ ದ್ವೀಪಸಮೂಹದಲ್ಲಿ ದಾಂಗುಡಿಯಿಡುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯು ಬುಧವಾರ ತಿಳಿಸಿದೆ.
ಅರಬಿ ಸಮುದ್ರದಲ್ಲಿಯ ತೀವ್ರ ವಾಯುಭಾರ ಕುಸಿತವು ಬುಧವಾರ ಸಂಜೆಯ ವೇಳೆಗೆ ಮಹಾ ಚಂಡಮಾರುತವಾಗಿ ರೂಪುಗೊಂಡಿದೆ ಎಂದು ಐಎಂಡಿ ಮಹಾನಿರ್ದೇಶಕ ಮೃತ್ಯುಂಜಯ ಮೊಹಾಪಾತ್ರಾ ಅವರು ತಿಳಿಸಿದರು.
ಮಂಗಳವಾರ ಕ್ಯಾರ್ ಚಂಡಮಾರುತ ಸೂಪರ್ ಸೈಕ್ಲೋನ್ ಆಗಿ ಪರಿವರ್ತನೆಗೊಂಡಿದ್ದು,ಇದು ಅರಬಿ ಸಮುದ್ರದಲ್ಲಿ ಇನ್ನೊಂದು ಅಪರೂಪದ ವಿದ್ಯಮಾನವಾಗಿತ್ತು. ಬುಧವಾರ ಅದು ‘ತೀವ್ರ ಚಂಡಮಾರುತ ’ವಾಗಿ ದುರ್ಬಲಗೊಂಡಿದ್ದರೆ,ತೀವ್ರ ವಾಯುಭಾರ ಕುಸಿತವು ‘ಮಹಾ’ಚಂಡಮಾರುತವಾಗಿ ರೂಪುಗೊಂಡಿದೆ.
ಸೂಪರ್ ಸೈಕ್ಲೋನ್‌ಗಳು ಸಾಮಾನ್ಯವಾಗಿ ಬಂಗಾಳ ಕೊಲ್ಲಿಯಲ್ಲಿ ಕಂಡು ಬರುತ್ತವೆ.
ಅರಬಿ ಸಮುದ್ರದಲ್ಲಿ ಒಂದೇ ಸಮಯದಲ್ಲಿ ಎರಡು ಚಂಡಮಾರುತಗಳು ಉಂಟಾಗಿರುವುದು ಕೂಡ ಅಪರೂಪದ ವಿದ್ಯಮಾನವಾಗಿದೆ ಎಂದು ಮೊಹಾಪಾತ್ರ ತಿಳಿಸಿದರು. ‘ಮಹಾ’ಚಂಡಮಾರುತವು ಮುಂದಿನ 24 ಗಂಟೆಗಳಲ್ಲಿ ಲಕ್ಷದ್ವೀಪವನ್ನು ದಾಟಲಿದ್ದು,ನ.2ರ ವೇಳೆಗೆ ಅತ್ಯಂತ ತೀವ್ರ ಚಂಡಮಾರುತವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದರು.
1972ರ ಬಳಿಕ ಇದೇ ಮೊದಲ ಬಾರಿಗೆ ಅರಬಿ ಸಮುದ್ರದಲ್ಲಿ ಎರಡು ಚಂಡಮಾರುತಗಳು ಏಕಕಾಲದಲ್ಲಿ ಅಬ್ಬರಿಸುತ್ತಿವೆ ಎಂದು ಅಮೆರಿಕದ ಖ್ಯಾತ ಹವಾಮಾನ ತಜ್ಞ ಫಿಲಿಪ್ ಕ್ಲೋಝ್‌ಬ್ಯಾಚ್ ಹೇಳಿದ್ದಾರೆ.
ಮುಂದಿನ ಎರಡು ದಿನಗಳಲ್ಲಿ ಕೇರಳ,ಲಕ್ಷದ್ವೀಪ,ಮತ್ತು ದಕ್ಷಿಣ ತಮಿಳುನಾಡಿನ ಹೆಚ್ಚಿನ ಸ್ಥಳಗಳಲ್ಲಿ ಸಾಧಾರಣದಿಂದ ಮಧ್ಯಮ ಪ್ರಮಾಣದ ಮಳೆ ಹಾಗೂ ಅಲ್ಲಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಐಎಂಡಿ ತಿಳಿಸಿದೆ. ಆ.31ರಂದು ಕರಾವಳಿ ಕರ್ನಾಟಕದಲ್ಲಿ ಅಲ್ಲಲ್ಲಿ ಭಾರೀಯಿಂದ ಅತ್ಯಂತ ಭಾರೀ ಮಳೆಯಾಗುವ ಬಗ್ಗೆಯೂ ಅದು ಮುನ್ಸೂಚನೆ ನೀಡಿದೆ.
ಮುಂದಿನ 48 ಗಂಟೆಗಳಲ್ಲಿ ಕನ್ಯಾಕುಮಾರಿ-ಮಾಲ್ದೀವ್ಸ್,ಲಕ್ಷದ್ವೀಪ ಪ್ರದೇಶಗಳಲ್ಲಿ ಮತ್ತು ಕೇರಳ-ಕರ್ನಾಟಕದ ಕರಾವಳಿಯಲ್ಲಿ ಸಮುದ್ರಕ್ಕಿಳಿಯದಂತೆ ಅದು ಮೀನುಗಾರರಿಗೆ ಎಚ್ಚರಿಕೆಯನ್ನೂ ನಿಡಿದೆ.
ಐಎಂಡಿಯ ಪ್ರಾರಂಭಿಕ ಅಂದಾಜುಗಳಂತೆ ‘ಮಹಾ ’ ಚಂಡಮಾರುತವು ಲಕ್ಷದ್ವೀಪವನ್ನು ದಾಟಿದ ಬಳಿಕ ಪಶ್ಚಿಮಕ್ಕೆ ತಿರುವು ಪಡೆದುಕೊಳ್ಳಲಿದೆ ಮತ್ತು ದಕ್ಷಿಣ ಒಮಾನ್-ಯೆಮನ್ ಕರಾವಳಿಯತ್ತ ಸಾಗಲಿದೆ,ಹೀಗಾಗಿ ಭಾರತದ ಮುಖ್ಯಭೂಮಿಯ ಮೇಲೆ ನೇರ ಪ್ರಭಾವ ಬೀರುವ ಸಾಧ್ಯತೆಗಳು ಕಡಿಮೆ ಎನ್ನಲಾಗಿದೆ.







