ಬೆಂಗಳೂರು: 43 ಅಡಿ ಎತ್ತರದ ಪ್ರಕೃತಿ ದೇವನ ಮೂರ್ತಿ ಉದ್ಘಾಟನೆ
ಬೆಂಗಳೂರು, ಅ.31: ವನ್ಯಧಾಮ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದ ಯಡಿಯೂರು ವಾರ್ಡ್ನ ಸೌತ್ ಎಂಡ್ ವೃತ್ತದಲ್ಲಿ ಸುಮಾರು 43 ಅಡಿ ಎತ್ತರದ ಪ್ರಕೃತಿ ದೇವನ ಮೂರ್ತಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಡುಗಳು ಮತ್ತು ವನ್ಯಜೀವಿಗಳನ್ನು ಸಂರಕ್ಷಿಸುವುದು ಎಲ್ಲರ ಕರ್ತವ್ಯ. ಇಲ್ಲದಿದ್ದಲ್ಲಿ ಭವಿಷ್ಯದಲ್ಲಿ ಅಪಾಯಕರ ಸ್ಥಿತಿಯನ್ನು ಎದುರಿಸಬೇಕಾಗುತ್ತದೆ. ವನ್ಯಜೀವಿ ಸಂರಕ್ಷಣೆ ಎಲ್ಲರ ಕರ್ತವ್ಯವಾಗಬೇಕು. ಪ್ರಕೃತಿ ದೇವನ ಪರಿಕಲ್ಪನೆ ದೇಶದಲ್ಲೇ ಮೊದಲನೆಯದು. ಮುಂದಿನ ದಿನಗಳಲ್ಲಿ ನಗರ ಪ್ರದಕ್ಷಿಣೆ ನಡೆಸಿ, ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ನಗರದ ಜನತೆಗೆ ಪ್ರಕೃತಿಯ ಬಗ್ಗೆ ಅರಿವು ಮೂಡಿಸಲು ಈ ಉದ್ಯಾನವನ ಸಹಕಾರಿಯಾಗಲಿದೆ. ಪ್ರತಿಯೊಬ್ಬ ನಾಗರಿಕರೂ ಪ್ರಕೃತಿಯನ್ನು ಸಂರಕ್ಷಿಸಬೇಕು ಎಂಬ ಪ್ರಕೃತಿ ಸಂದೇಶವನ್ನು ಸಾರಲಿದೆ ಎಂದು ಅವರು ತಿಳಿಸಿದರು.
ಮೇಯರ್ ಗೌತಮ್ ಕುಮಾರ್ ಜೈನ್ ಮಾತನಾಡಿ, ನಗರದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಸಂಬಂಧ ನ.2 ರಿಂದ ಪ್ರತಿ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ರಸ್ತೆ ಗುಂಡಿ ಮುಚ್ಚಲು ಕ್ರಮ ಕೈಗೊಳ್ಳಲಾಗುವುದು. ರಸ್ತೆ ಗುಂಡಿಗಳನ್ನು ಮುಚ್ಚುವ ಕುರಿತಂತೆ ಈಗಾಗಲೇ ಶಾಸಕರು ಹಾಗೂ ಬಿಬಿಎಂಪಿ ಸದಸ್ಯರುಗಳಿಗೆ ಪತ್ರ ಬರೆದು ಮನವಿ ಮಾಡಿದ್ದೇನೆ ಎಂದು ತಿಳಿಸಿದರು.
ನವೆಂಬರ್ ಒಂದರಿಂದ ನಗರದ ಪ್ರತಿ ಅಂಗಡಿಗಳ ಮುಂದಿನ ನಾಮಫಲಕಗಳು ಕನ್ನಡದಲ್ಲಿ ಇರಬೇಕು ಎಂಬುದನ್ನು ಕಡ್ಡಾಯಗೊಳಿಸಲಾಗುವುದು. ಕನ್ನಡದಲ್ಲಿ ನಾಮಫಲಕ ಇಲ್ಲದಿದ್ದ ಅಂಗಡಿಗಳಿಗೆ ಟ್ರೇಡ್ ಲೈಸನ್ಸ್ ರದ್ದುಗೊಳಿಸುವ ಕುರಿತಂತೆ ವಿಶೇಷ ಆಯುಕ್ತರು ಕ್ರಮಕೈಗೊಳ್ಳಲಿದ್ದಾರೆ ಎಂದು ಹೇಳಿದರು.
ಸಮಾರಂಭದಲ್ಲಿ ಸಂಸದ ತೇಜಸ್ವಿ ಸೂರ್ಯ, ಬಿಬಿಎಂಪಿ ಸದಸ್ಯೆ ಪೂರ್ಣಿಮ ರಮೇಶ್, ಮಾಜಿ ಆಡಳಿತ ಪಕ್ಷದ ನಾಯಕ ಎನ್.ಆರ್.ರಮೇಶ್, ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್ ಕುಮಾರ್ ಮತ್ತಿತರರಿದ್ದರು.