ಮಹಿಳಾ ಸಾಹಿತಿಯೊಬ್ಬರಿಗೆ ಪಂಪ ಪ್ರಶಸ್ತಿ ನೀಡಿ ಬದ್ಧತೆ ಮೆರೆಯಲಿ: ಕಮಲಾ ಹಂಪನಾ

ಬೆಂಗಳೂರು, ಅ.31: ರಾಜ್ಯ ಸರಕಾರ ಈ ಬಾರಿ ಪಂಪ ಪ್ರಶಸ್ತಿಯನ್ನು ಮಹಿಳಾ ಸಾಹಿತಿಯೊಬ್ಬರಿಗೆ ನೀಡುವ ಮೂಲಕ ಬದ್ಧತೆ ತೋರಿಸಬೇಕೆಂದು ನಾಡೋಜ ಕಮಲಾ ಹಂಪನಾ ಒತ್ತಾಯಿಸಿದ್ದಾರೆ.
ಗುರುವಾರ ಕರ್ನಾಟಕ ಲೇಖಕಿಯರ ಸಂಘದ ವತಿಯಿಂದ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಯವರನ್ನು ಶೀಘ್ರದಲ್ಲಿಯೇ ಭೇಟಿಯಾಗಿ ಮಹಿಳಾ ಸಾಹಿತಿಯೋರ್ವರಿಗೆ ಪಂಪ ಪ್ರಶಸ್ತಿ ನೀಡಬೇಕೆಂದು ಮನವಿ ಮಾಡಲಾಗುವುದು ಎಂದರು.
ಪಂಪ ಪ್ರಶಸ್ತಿ ಸೇರಿದಂತೆ ರಾಜ್ಯ ಸರಕಾರ ಕೊಡಮಾಡುವ ಉನ್ನತ ಪ್ರಶಸ್ತಿಗಳಿಗೆ ಮಹಿಳಾ ಸಮುದಾಯವನ್ನು ಪರಿಗಣಿಸುತ್ತಿಲ್ಲವೆಂದು ಬೇಸರ ಆಗುತ್ತಿತ್ತು. ಆ ಸಂದರ್ಭದಲ್ಲಿ ಮಹಿಳೆಯರಿಗಾಗಿ ಅತಿಮಬ್ಬೆ ಪ್ರಶಸ್ತಿ ಜಾರಿ ಮಾಡಬೇಕೆಂದು ಬಂಗಾರಪ್ಪ, ವೀರಪ್ಪ ಮೊಯ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಮನವಿ ಮಾಡಿದೆ, ಆಗಲಿಲ್ಲ. ಎಚ್.ಡಿ.ದೇವೇಗೌಡ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅತಿಮಬ್ಬೆ ಪ್ರಶಸ್ತಿ ಜಾರಿಗೆ ಬಂತೆಂದು ಅವರು ಹೇಳಿದರು.
ಹಿರಿಯ ಪತ್ರಕರ್ತೆ ವಿಜಯಮ್ಮ ಮಾತನಾಡಿ, ಪ್ರೊ.ಕಮಲಾ ಹಂಪನಾ ಚಿಂತನೆ ಹಾಗೂ ಬರಹಗಳು ಮಹಿಳಾ ಸಮುದಾಯ ಹಾಗೂ ದೀನ ದಲಿತರ ಪರವಾಗಿದ್ದು, ಹೊಸ ದಿಕ್ಕನ್ನು ತೋರಿಸುವಂತಹದ್ದಾಗಿದೆ. ವಿದ್ಯಾರ್ಥಿ ದೆಸೆಯಲ್ಲಿ ಎಸ್. ಬಂಗಾರಪ್ಪರವರ ಸಹಪಾಠಿಯಾಗಿದ್ದ ಅವರು, ಆಗಿನಿಂದಲೇ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಹೀಗಾಗಿಯೇ ಕಮಲಾ ಹಂಪನಾರವರ ಬರಹಗಳು ಸಮಾಜಮುಖಿ ಚಿಂತನೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.
ಕಮಲಾ ಹಂಪನಾರವರ ‘ಬಲಾಕ’ ಪ್ರಬಂಧ ಸಂಕಲನವು ಉತ್ಕೃಷ್ಟ ಕೃತಿಯಾಗಿದೆ. ಈ ಕೃತಿಯಲ್ಲಿ ಮಹಿಳಾ ಸಮುದಾಯ ಎದುರಿಸುತ್ತಿರುವ ಸಂಕಷ್ಟಗಳು, ಮಹಿಳಾ ಸಾಧಕಿಯರ ಕುರಿತ ಬರಹಗಳು ಹಾಗೂ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ, ರಾಜಕೀಯ ವಿಷಯಗಳ ಕುರಿತು ವಿವಿಧ ಆಯಾಮಗಳಲ್ಲಿ ತಮ್ಮ ಚಿಂತನೆಗಳನ್ನು ಬರಹ ರೂಪಕ್ಕೆ ಇಳಿಸಿದ್ದಾರೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ನಿವೃತ್ತ ಅಧಿಕಾರಿ ಕೃಷ್ಣಮೂರ್ತಿ, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ವನಮಾಲಾ ಸಂಪನ್ನಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಷ್ಟ್ರಕವಿ ಕುವೆಂಪು ನನ್ನ ಗುರುಗಳು. ಅವರ ಮೇಲಿನ ಗೌರವಗಳನ್ನು ಇಟ್ಟುಕೊಂಡೇ ಹೇಳುತ್ತಿದ್ದೇನೆ, ಅವರ ರಚನೆಯ ನಾಡಗೀತೆಯನ್ನು ಸಂಕ್ಷಿಪ್ತಗೊಳಿಸಬೇಕಾದ ಅಗತ್ಯವಿದೆ. ಮೊದಲ ಹಾಗೂ ಕೊನೆಯ ಪ್ಯಾರಾಗಳನ್ನು ಇಟ್ಟುಕೊಂಡು ಹಾಡಿದರೆ ಸಾಕು. ಇದರಿಂದ ಕುವೆಂಪುರವರಿಗಾಗಲಿ, ನಾಡಗೀತೆಗಾಗಲಿ ಯಾವುದೇ ಚ್ಯುತಿ ಬರುವುದಿಲ್ಲ.
-ಕಮಲಾ ಹಂಪನಾ, ಹಿರಿಯ ಸಾಹಿತಿ







