ಟಿಪ್ಪು, ಹೈದರಾಲಿ ಇಲ್ಲದೆ ಮೈಸೂರು ಇತಿಹಾಸ ಸಾಧ್ಯವೇ ?: ಸಿದ್ದರಾಮಯ್ಯ ಪ್ರಶ್ನೆ

ಮಂಡ್ಯ, ಅ.31: ಟಿಪ್ಪು, ಹೈದರಾಲಿ ಇಲ್ಲದೆ ಮೈಸೂರು ಇತಿಹಾಸ ಸಾಧ್ಯವೇ? ಎಂದು ಪ್ರಶ್ನಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, ಮುಸ್ಲಿಂ ಎಂಬ ಕಾರಣಕ್ಕೆ ಟಿಪ್ಪು ಪಾಠವನ್ನು ಪಠ್ಯದಿಂದ ತೆಗೆಯುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.
ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆ ದಿನವಾದ ಗುರುವಾರ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಇಂದಿರಾಗಾಂಧಿ ಅವರ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜಕೀಯ ದ್ವೇಷದ ಕಾರಣಕ್ಕೆ ಟಿಪ್ಪು ಪಾಠ ತೆಗೆಯುವ ಯತ್ನ ನಡೆದಿದೆ ಎಂದರು. ಇದೇ ಯಡಿಯೂರಪ್ಪ ಕೆಜೆಪಿಯಲ್ಲಿದ್ದಾಗ ಟಿಪ್ಪು ಜಯಂತಿ ಆಚರಣೆ ಮಾಡಿದಾಗ ಮತ್ತು ಜಗದೀಶ್ ಶೆಟ್ಟರ್, ಅಶೋಕ್, ಪಿ.ಸಿಮೋಹನ್ ಟಿಪ್ಪು ವೇಷ ಧರಿಸಿದಾಗ ಟಿಪ್ಪು ಸುಲ್ತಾನ್ ಮತಾಂಧನಂತೆ ಕಾಣಲಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.
ಇದು ರಾಜಕೀಯ ಸೇಡಿನ ಕ್ರಮವಲ್ಲದೆ ಬೇರೆನೂ ಇಲ್ಲ. ಚರಿತ್ರೆಯನ್ನು ತಿರುಚಲು ಹೋಗಬಾರದು. ಅದು ಹೇಗಿದೆಯೋ ಹಾಗೆಯೇ ಇರಬೇಕು. ಸೇಡಿನ ರಾಜಕಾರಣ ತರವಲ್ಲ ಎಂದು ಎಂದು ಅವರು ಸಲಹೆ ನೀಡಿದರು.
ನೆರೆ ಸಂತ್ರಸ್ತರೆಲ್ಲರಿಗೂ ಪರಿಹಾರ ನೀಡಿದ್ದೇನೆಂಬ ಯಡಿಯೂರಪ್ಪ ಹೇಳಿಕೆ ಸುಳ್ಳು. ಮನೆ ಕಳೆದುಕೊಂಡಿರುವ ಎಲ್ಲರಿಗೂ ಪರಿಹಾರ ದೊರಕಿಲ್ಲ. ಹಾಗಾದರೆ ಪತ್ರಿಕೆಗಳಲ್ಲಿ ಬರೆದಿರುವುದು ಸುಳ್ಳೇ ಎಂದು ಸಿದ್ದರಾಮಯ್ಯ ಮಾಧ್ಯಮದವರನ್ನೇ ಪ್ರಶ್ನಿಸಿದರು.
ಆರ್ ಸಿಇಪಿ ಒಪ್ಪಂದಕ್ಕೆ ಸಹಿಹಾಕಿದರೆ ಹಾಲು ಉತ್ಪಾದಕರಿಗೆ ದೊಡ್ಡ ಹೊಡೆತ ಬೀಳಲಿದೆ. ಕೇಂದ್ರ ವಿತ್ತ ಸಚಿವರ ಹೇಳಿಕೆ ಸರಿಯಲ್ಲ. ಏಕೆಂದರೆ ಜಾಗತಿಕ ಮಟ್ಟದಲ್ಲಿ ಸ್ಪರ್ಧೆ ಎದುರಿಸಲು ಸಾಧ್ಯವಿಲ್ಲ. ನಮ್ಮ ರೈತರನ್ನು ಬಲಿಕೊಟ್ಟು ಸ್ಪರ್ಧೆ ಎದುರಿಸೋದು ಕಷ್ಟ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಇಂದಿರಾ ಗಾಂಧಿ ಧೀರ, ದಿಟ್ಟ ಮಹಿಳೆ. ಇವತ್ತಿಗೂ ಬಡವರ ಇಂದಿರಮ್ಮ ಎಂದೇ ಖ್ಯಾತಿ. ಅವರ ಕಾಲದಲ್ಲಿ ಜಾರಿಗೆ ತಂದ ಬ್ಯಾಂಕ್‍ಗಳ ರಾಷ್ಟ್ರೀಕರಣ, ಉಳುವವನೇ ಭೂಮಿಯ ಒಡೆಯ, ಬಡವರ ಸಾಲಮನ್ನಾ, ವಸತಿ ಹೀನರಿಗೆ ವಸತಿ ಸೌಲಭ್ಯ ಒಳಗೊಂಡ 20 ಅಂಶಗಳ ಕಾರ್ಯಕ್ರಮ ಜನಪ್ರಿಯ. ಪಾಕ್ ಯುದ್ಧ ಗೆದ್ದಾಗ ವಾಜಪೇಯಿಯವರು ಸಂಸತ್‍ನಲ್ಲಿ ಇಂದಿರಾಗಾಂಧಿಯವರನ್ನು ದುರ್ಗೆ ಎಂದು ಕರೆದಿದ್ದರು ಎಂದು ಅವರು ಸ್ಮರಿಸಿದರು.
ಮಾಜಿ ಸಚಿವರಾದ ಎನ್.ಚಲುವರಾಯಸ್ವಾಮಿ, ಪಿಎಂ ನರೇಂದ್ರಸ್ವಾಮಿ, ಎಂ.ಎಸ್.ಆತ್ಮಾನಂದ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ್ ಸೇರಿ ಅನೇಕ ಮುಖಂಡರು ಉಪಸ್ಥಿತರಿದ್ದರು.
ನನ್ನ ಪ್ರಕಾರ ಸರಕಾರದ ಭವಿಷ್ಯ ಉಪಚುನಾವಣೆ ಮೇಲೆ ನಿಂತಿದೆ. ಈಗ ಬಿಜೆಪಿಯಲ್ಲಿ 105 ಶಾಸಕರು ಇದ್ದಾರೆ. ಬಹುಮತ ಸಾಬೀತಿಗೆ 113 ಶಾಸಕರು ಬೇಕು. 15 ಸ್ಥಾನ ನಾವೇ ಗೆದ್ದರೆ ಹೇಗೆ ಸರಕಾರ ಇರುತ್ತೆ. 8 ಸ್ಥಾನ ಗೆಲ್ಲದಿದ್ದರೆ ಯಡಿಯೂರಪ್ಪ ರಾಜೀನಾಮೆ ಕೊಡಬೇಕಲ್ವ?”
-ಸಿದ್ದರಾಮಯ್ಯ







