ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಕರಾವಳಿಯಲ್ಲಿ ಗಾಳಿ-ಮಳೆಯ ಎಚ್ಚರಿಕೆ

ಉಡುಪಿ, ಅ.31:ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ಅರಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಇದರಿಂದ ‘ಮಹಾ’ ಚಂಡಮಾರುತ ಲಕ್ಷದ್ವೀಪದಲ್ಲಿ ರೂಪುಗೊಂಡಿದೆ. ಇದು ಉತ್ತರ ಪಶ್ಚಿಮ ದಿಕ್ಕಿನಲ್ಲಿ ಗಂಟೆಗೆ 15ಕಿ.ಮೀ. ವೇಗದಲ್ಲಿ ಚಲಿಸುತಿದ್ದು, ಇದರಿಂದ ಲಕ್ಷ ದ್ವೀಪ ಹಾಗೂ ಮಧ್ಯಪೂರ್ವ ಅರಬಿಸಮುದ್ರದಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾರೀ ಗಾಳಿ ಮತ್ತು ಮಳೆ ಬರುವ ಸಾಧ್ಯತೆ ಇದೆ.
ಈ ವೇಳೆ ಮೀನುಗಾರರು ಮೀನುಗಾರಿಕೆಗೆ ತೆರಳದಂತೆ ಹವಾಮಾನ ಇಲಾಖೆಯವರು ರೆಡ್‌ಅಲರ್ಟ್ ಸಂದೇಶ ನೀಡಿದ್ದಾರೆ. ಪೂರ್ವ ಮಧ್ಯ ಅರಬಿಸಮುದ್ರದಲ್ಲಿ ನ.4ರವರೆಗೆ ಕೇರಳ, ಕರ್ನಾಟಕ ಕರಾವಳಿಯಲ್ಲಿ ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಿದ್ದಾರೆ.
ಈ ನಡುವೆ ‘ಕ್ಯಾರ್’ ಚಂಡಮಾರುತ ಪಶ್ಚಿಮ ಕೇಂದ್ರ ಹಾಗೂ ಉತ್ತರ ಪಶ್ಚಿಮ ಅರಬಿಸಮುದ್ರದಲ್ಲಿ ಗಂಟೆಗೆ 15ಕಿ.ಮೀ. ವೇಗದಲ್ಲಿ ಚಲಿಸುತ್ತಿದ್ದು, ಈ ಭಾಗಗಳಲ್ಲಿ ನ.2ರವರೆಗೆ ಭಾರೀ ಗಾಳಿ-ಮಳೆ ಬರುವ ಸಂಭವವಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗಾಗಿ ಮಹಾರಾಷ್ಟ್ರ ಕರಾವಳಿಗೆ ತೆರಳದಂತೆ ಎಚ್ಚರಿಕೆ ನೀಡಲಾಗಿದೆ ಎಂದು ಮಲ್ಪೆಯ ಕರಾವಳಿ ಕಾವಲು ಪೊಲೀಸ್‌ನ ಪೊಲೀಸ್ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಭಾಗದಲ್ಲಿ ನ.1ರಂದು ಪ್ರತಿಕೂಲ ಪರಿಣಾಮದಿಂದಾಗಿ ಹೆಚ್ಚಿನ ಗಾಳಿಯೊಂದಿಗೆ ಮಳೆ ಬರುವ ಸಾಧ್ಯತೆ ಇರುವುದರಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗೃತ ಕ್ರಮಕ್ಕಾಗಿ ಈ ಕೆಳಗಿನ ಸೂಚನೆಗಳನ್ನು ನೀಡಿದೆ.
ಮೀನುಗಾರರು/ಪ್ರವಾಸಿಗರು ನದಿತೀರ / ಸಮುದ್ರಕ್ಕೆ ಇಳಿಯದಂತೆ ಎಚ್ಚರ ವಹಿಸಬೇಕು. ಜಿಲ್ಲಾ/ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿ ಇರಬೇಕು. ತಗ್ಗು ಪ್ರದೇಶ/ ಕೆರೆ/ನದಿ ತೀರ/ ಸಮುದ್ರ ತೀರ ಪ್ರದೇಶಗಳಿಗೆ ಮಕ್ಕಳು ಹೋಗದಂತೆ ಪಾಲಕರು ಜಾಗೃತಿ ವಹಿಸಬೇಕು. ಮಕ್ಕಳು/ ಸಾರ್ವಜನಿಕರು ಅಪಾಯಕಾರಿ ವಿದ್ಯುತ್ ಕಂಬ/ ಮರಗಳ ಕೆಳಗೆ ನಿಲ್ಲದೆ ಸುರಕ್ಷಿತ ಸ್ಥಳಗಳಿಗೆ ತಲುಪುವಂತೆ ಹಾಗೂ ತುರ್ತು ಸೇವೆಗೆ ಟೋಲ್ ಫ್ರೀ ನಂ: 1077, ದೂರವಾಣಿ ಸಂಖ್ಯೆ: 0820-2574802/2574360 ನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.







