ಯುನೆಸ್ಕೋದ ಸೃಜನಾತ್ಮಕ ನಗರಗಳ ಪಟ್ಟಿಯಲ್ಲಿ ಭಾರತದ ಈ 2 ನಗರಗಳು…

ಪ್ಯಾರಿಸ್, ಅ.31: ಯುನೆಸ್ಕೋ ಗುರುವಾರ ಬಿಡುಗಡೆಗೊಳಿಸಿರುವ ವಿಶ್ವದ 66 ಸೃಜನಾತ್ಮಕ ನಗರಗಳ ಪಟ್ಟಿಯಲ್ಲಿ ಮುಂಬೈ ಮತ್ತು ಹೈದರಾಬಾದ್ ಸ್ಥಾನ ಪಡೆದಿವೆ.
ಚಿತ್ರಜಗತ್ತಿಗೆ ತನ್ನ ಕೊಡುಗೆಗಾಗಿ ಮುಂಬೈ ಮತ್ತು ಭೋಜನ ಕಲೆ ಅಥವಾ ಅತ್ಯುತ್ತಮ ಆಹಾರಗಳಿಗಾಗಿ ಹೈದರಾಬಾದ್ ನಗರಗಳನ್ನು ಆಯ್ಕೆ ಮಾಡಲಾಗಿದೆ. ಉಭಯ ನಗರಗಳನ್ನು 246 ಸದಸ್ಯ ಬಲದ ಯುನೆಸ್ಕೋದ ಸೃಜನಶೀಲ ನಗರಗಳ ನೆಟ್‌ವರ್ಕ್‌ನ ಭಾಗವನ್ನಾಗಿಸುವ ಪ್ರಕಟಣೆ ವಿಶ್ವ ನಗರಗಳ ದಿನವಾದ ಗುರುವಾರ ಹೊರಬಿದ್ದಿದೆ.
ಈ ನೆಟ್‌ವರ್ಕ್ ಸಂಗೀತ, ಕಲೆ ಮತ್ತು ಜಾನಪದ ಕರಕುಶಲತೆ, ವಿನ್ಯಾಸ, ಸಿನೆಮಾ, ಸಾಹಿತ್ಯ,ಡಿಜಿಟಲ್ ಕಲೆ ಅಥವಾ ಭೋಜನ ಕಲೆಯಾಗಿರಲಿ, ಸೃಜನಶೀಲತೆಯ ಅಭಿವೃದ್ಧಿಯ ಆಧಾರದಲ್ಲಿ ನಗರಗಳನ್ನು ಏಕತ್ರಗೊಳಿಸುತ್ತದೆ. ಸಂಸ್ಕೃತಿಯನ್ನು ತಮ್ಮ ಅಭಿವೃದ್ಧಿ ಕಾರ್ಯತಂತ್ರಗಳ ಕೇಂದ್ರಬಿಂದುವನ್ನಾಗಿಸಲು ಮತ್ತು ತಮ್ಮ ಅತ್ಯುತ್ತಮ ಪದ್ಧತಿಗಳನ್ನು ಹಂಚಿಕೊಳ್ಳಲು ಯುನೆಸ್ಕೋ ಸೃಜನಶೀಲ ನಗರಗಳು ಬದ್ಧವಾಗಿರುತ್ತವೆ.
ವಿಶ್ವಾದ್ಯಂತ ಈ ನಗರಗಳು ತಮ್ಮದೇ ಆದ ರೀತಿಯಲ್ಲಿ ಸಂಸ್ಕೃತಿಯನ್ನು ತಮ್ಮ ಕಾರ್ಯತಂತ್ರದ ಸ್ತಂಭವನ್ನಾಗಿಸುತ್ತವೆ. ಇದು ರಾಜಕೀಯ ಮತ್ತು ಸಾಮಾಜಿಕ ಹೊಸತನಕ್ಕೆ ಪೂರಕವಾಗುತ್ತದೆ ಮತ್ತು ವಿಶೇಷವಾಗಿ ಯುವ ಪೀಳಿಗೆಗಳ ಪಾಲಿಗೆ ಮಹತ್ವದ್ದಾಗಿದೆ ಎಂದು ಯುನೆಸ್ಕೋದ ಮಹಾ ನಿರ್ದೇಶಕ ಆಡ್ರಿ ಅಝೌಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





