ರಾಜ್ಯ ಉಪ ಚುನಾವಣೆ: ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಕಾಂಗ್ರೆಸ್

ಬೆಂಗಳೂರು, ಅ.31: ಅನರ್ಹ ಶಾಸಕರಿಂದಾಗಿ ತೆರವಾಗಿರುವ 15 ಕ್ಷೇತ್ರಗಳಿಗೆ ಡಿಸೆಂಬರ್ 5ರಂದು ಉಪ ಚುನಾವಣೆ ನಡೆಯಲಿದ್ದು, ಆಡಳಿತರೂಢ ಬಿಜೆಪಿ ಹಾಗೂ ಜೆಡಿಎಸ್‌ಗಿಂತ ಮುಂಚಿತವಾಗಿ ಕಾಂಗ್ರೆಸ್ ಪಕ್ಷ ಎಂಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ.
ಸ್ಪೀಕರ್ ಕೆ.ಆರ್.ರಮೇಶ್ ಕುಮಾರ್ ತೀರ್ಪನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ನಡೆಸಿರುವ ಕಾನೂನು ಹೋರಾಟದ ತೀರ್ಪು ಹೊರ ಬರುವ ಮುನ್ನವೇ ಕಾಂಗ್ರೆಸ್ ಪಕ್ಷ ಎಂಟು ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿರುವುದರಿಂದ, ಅನರ್ಹ ಶಾಸಕರು ಹೊಸ ರಾಜಕೀಯ ಲೆಕ್ಕಾಚಾರದ ಮೊರೆ ಹೋಗುವಂತೆ ಮಾಡಿದೆ.
ಕಾಂಗ್ರೆಸ್ ಪಕ್ಷದ ಅನರ್ಹ ಶಾಸಕರಾದ ಅರಬೈಲ್ ಶಿವರಾಮ್ ಹೆಬ್ಬಾರ್, ಬಿ.ಸಿ.ಪಾಟೀಲ್, ಆರ್.ಶಂಕರ್(ಪಕ್ಷೇತರ), ಡಾ.ಸುಧಾಕರ್, ಭೈರತಿ ಬಸವರಾಜ, ಎಂಟಿಬಿ ನಾಗರಾಜ್, ಜೆಡಿಎಸ್ ಶಾಸಕರಾದ ಗೋಪಾಲಯ್ಯ, ಹಾಗೂ ಎಚ್.ವಿಶ್ವನಾಥ್ ಪ್ರತಿನಿಧಿಸುತ್ತಿದ್ದ ಕ್ಷೇತ್ರಗಳಿಗೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆದೇಶದಂತೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ.
ಯಲ್ಲಾಪುರ-ಭೀಮಣ್ಣ ನಾಯ್ಕ, ಹಿರೇಕೆರೂರು-ಬಿ.ಎಚ್.ಬನ್ನಿಕೋಡ್, ರಾಣೆಬೆನ್ನೂರು-ಕೆ.ಬಿ.ಕೋಳಿವಾಡ, ಚಿಕ್ಕಬಳ್ಳಾಪುರ-ಎಂ.ಆಂಜನಪ್ಪ, ಕೆ.ಆರ್.ಪುರ- ಎಂ.ನಾರಾಯಣಸ್ವಾಮಿ, ಮಹಾಲಕ್ಷ್ಮಿ ಲೇಔಟ್-ಎಂ.ಶಿವರಾಜ್, ಹೊಸಕೋಟೆ- ಪದ್ಮಾವತಿ ಸುರೇಶ್ ಹಾಗೂ ಹುಣಸೂರು- ಎಚ್.ಪಿ.ಮಂಜುನಾಥ್‌ರನ್ನು ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ.
ವಿಧಾನಪರಿಷತ್ತಿನ ಈಶಾನ್ಯ ಶಿಕ್ಷಕರ ಕ್ಷೇತ್ರ-ಶರಣಪ್ಪ ಮಟ್ಟೂರು ಹಾಗೂ ಪಶ್ಚಿಮ ಪದವೀಧರ ಕ್ಷೇತ್ರ-ಡಾ.ಆರ್.ಎಂ.ಕುಬೇರಪ್ಪರನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಆದೇಶ ಹೊರಡಿಸಿದ್ದಾರೆ.







