ಮಂಗಳೂರಿನಲ್ಲಿ ಐಸ್‌ಕ್ರೀಂ ಸವಿದ ಡಿಸಿಎಂ ಅಶ್ವಥ್ ನಾರಾಯಣ
ಕಾಲೇಜು ದಿನಗಳ ಮೆಲುಕು
ಮಂಗಳೂರು, ಅ.31: ರಾಜ್ಯದ ಉಪಮುಖ್ಯಮಂತ್ರಿ ಡಾ. ಅಶ್ವಥ್ ನಾರಾಯಣ ಗುರುವಾರ ಮುಸ್ಸಂಜೆ ನಗರದ ಜಿಎಚ್‌ಎಸ್ ರಸ್ತೆಯಲ್ಲಿರುವ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ಗೆ ತನ್ನ ಗೆಳೆಯರ ಜೊತೆಗೂಡಿ ಐಸ್‌ಕ್ರೀಂ ಸವಿದು ಕಾಲೇಜು ದಿನಗಳನ್ನು ಮೆಲುಕು ಹಾಕಿದರು.
ಖಾಸಗಿ ಕಾರ್ಯಕ್ರಮ ನಿಮಿತ್ತ ಮಂಗಳೂರಿಗೆ ದಿಢೀರ್ ಭೇಟಿ ನೀಡಿದ ಡಾ.ಅಶ್ವಥ ನಾರಾಯಣ ಅವರು ಶಾಸಕರಾದ ರಾಜೇಶ್ ನಾಯಕ್, ಡಾ.ಭರತ್ ಶೆಟ್ಟಿ, ಬಿಜೆಪಿ ಮುಖಂಡ ಹರಿಕೃಷ್ಣ ಬಂಟ್ವಾಳ್ ಮತ್ತಿತರರೊಂದಿಗೆ ಐಸ್‌ಕ್ರೀಂ ಸವಿದರು.
ಈ ಸಂದರ್ಭ ಮಾಧ್ಯಮದವರೊಂದಿಗೆ ಮಾತನಾಡಿದ ಡಿಸಿಎಂ ಡಾ.ಅಶ್ವಥ ನಾರಾಯಣ ‘1988ರಿಂದ 1994ರವರೆಗೆ ನಾನು ಕೆಎಂಸಿ ವಿದ್ಯಾರ್ಥಿಯಾಗಿದ್ದೆ. ಕಾಲೇಜು ದಿನಗಳಲ್ಲಿ ಆಗಾಗ ಐಡಿಯಲ್ ಐಸ್‌ಕ್ರೀಂ ಪಾರ್ಲರ್‌ಗೆ ಬಂದು ಐಸ್‌ಕ್ರೀಂ ಸವಿಯುತ್ತಿದ್ದೆ. ಕಾಲೇಜು ವ್ಯಾಸಾಂಗ ಮುಗಿಸಿ ರಾಜಕಾರಣದಲ್ಲಿ ಸಕ್ರಿಯರಾದರೂ ಕೂಡಾ ಇಲ್ಲಿನ ನೆನಪು ಮಾಸಿಲ್ಲ. ಮಂಗಳೂರಿಗೆ ಬಂದಾಗಲೆಲ್ಲಾ ಇಲ್ಲಿಗೆ ಬರುತ್ತಿರುವೆ. ಈವತ್ತೂ ಅಷ್ಟೆ, ಹಳೆಯ ನೆನಪಿನಲ್ಲೇ ಬಂದಿದ್ದೇನೆ. ನಾನು ನನ್ನ ಬದುಕಿನಲ್ಲಿ ಏನಾದರು ಸಾಧನೆ ಮಾಡಿದ್ದಿದ್ದರೆ ಅದಕ್ಕೆ ಮಂಗಳೂರಿಗರ ಸಹವಾಸವೂ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ’ ಎಂದರು.