ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿದ ಆರೋಪ: ಮೂವರ ಬಂಧನ

ಶಿವಮೊಗ್ಗ, ಅ. 31: ಬೀದಿ ನಾಯಿ ಬಾಲಕ್ಕೆ ಪಟಾಕಿ ಕಟ್ಟಿ ಬೆಂಕಿ ಹಚ್ಚಿ ಹಿಂಸಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಭದ್ರಾವತಿ ಗ್ರಾಮಾಂತರ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಭದ್ರಾವತಿ ತಾಲೂಕಿನ ನಿತಿನ್, ಮಿಥುನ್ ಹಾಗೂ ಭರತ್ ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಶಿವಮೊಗ್ಗದ ಅನಿಮಲ್ ರೆಸ್ಕ್ಯೂ ಕ್ಲಬ್ ಪ್ರಮುಖರು ನೀಡಿದ ದೂರಿನ ಆಧಾರದ ಮೇಲೆ, ಪ್ರಾಣಿಗಳ ಸಂರಕ್ಷಣಾ ಕಾಯ್ದೆ ಹಾಗೂ ಐಪಿಸಿಯ ವಿವಿಧ ಕಲಂಗಳಡಿ ಪೊಲೀಸರು ಆಪಾದಿತರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ: ದೀಪಾವಳಿ ಹಬ್ಬದ ದಿನದಂದು ಬೀದಿ ನಾಯಿ ಬಾಲಕ್ಕೆ ಪಟಾಕಿ ಕಟ್ಟಿ, ಪಟಾಕಿಗೆ ಬೆಂಕಿ ಹಚ್ಚಿದ್ದ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಮೂವರು ಯುವಕರು ಈ ಕೃತ್ಯ ಎಸಗಿದ್ದು ಕಂಡುಬಂದಿತ್ತು. ನಾಯಿಯನ್ನು ಹಿಂಸಿಸಿದ ಕ್ರಮಕ್ಕೆ ಪ್ರಾಣಿಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು.
ಈ ವೀಡಿಯೋ ಹಾಗೂ ಅದರಲ್ಲಿ ಕಂಡುಬಂದಿದ್ದ ಬೈಕ್‍ವೊಂದರ ನೊಂದಣಿ ಸಂಖ್ಯೆ ಆಧಾರದ ಮೇಲೆ, ಅನಿಮಲ್ ರೆಸ್ಕ್ಯೂ ಕ್ಲಬ್ ಸಂಸ್ಥೆಯು ಪೊಲೀಸರಿಗೆ ದೂರು ನೀಡಿತ್ತು. ಪ್ರಾಣಿ ಸಂರಕ್ಷಣಾ ಕಾಯ್ದೆಯಡಿ ಆರೋಪಿಗಳ ವಿರುದ್ದ ಕ್ರಮಕೈಗೊಳ್ಳುವಂತೆ ಮನವಿ ಮಾಡಿತ್ತು.
ಈ ಬಗ್ಗೆ ಎಫ್‍ಐಆರ್ ದಾಖಲಿಸಿಕೊಂಡ ಪೊಲೀಸರು ಬೈಕ್‍ನ ನೊಂದಣಿ ಸಂಖ್ಯೆ ಆಧಾರದ ಮೇಲೆ ತನಿಖೆ ನಡೆಸಿದ್ದರು. ಈ ವೇಳೆ ಮೂವರು ಆರೋಪಿಗಳ ವಿವರ ಪತ್ತೆಯಾಗಿತ್ತು. ಜೊತೆಗೆ ಭದ್ರಾವತಿ ತಾಲೂಕಿನ ಬಿಆರ್‍ಪಿ ಸಮೀಪದ ಸಿಂಗನಬಿದರೆ ಗ್ರಾಮದಲ್ಲಿ ಘಟನೆ ನಡೆದಿದ್ದು ಬೆಳಕಿಗೆ ಬಂದಿತ್ತು.







