ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದ ದ.ಕ. ಜಿಲ್ಲೆಯ 'ಸಿನಿ ಚಾಲಕ' ವೃತ್ತಿ ಅಂತ್ಯ!
1979ರಿಂದ 2019ರವರೆಗೆ...: ಫ್ರಾನ್ಸಿಸ್ ಲೂವಿಸ್ ಕಥೆಯನ್ನು ನೀವು ಓದಲೇಬೇಕು...

ಫ್ರಾನ್ಸಿಸ್ ಲೂವಿಸ್
ಮಂಗಳೂರು, ಅ.31: ಸಾರ್ವಜನಿಕರಿಗೆ ಅರಿವು ಮತ್ತು ಜಾಗೃತಿ ಮೂಡಿಸಲು ರಾಜ್ಯ ಸರಕಾರದ ವಿವಿಧ ಸಾಕ್ಷ್ಯ ಹಾಗೂ ಛಾಯಾ ಚಿತ್ರಗಳನ್ನು ಪ್ರದರ್ಶಿಸಲು ರಾಜ್ಯ ಸರಕಾರಿ ಸೇವೆಯಲ್ಲಿದ್ದ ‘ಸಿನಿ ಚಾಲಕ’ ಎಂಬ ಹುದ್ದೆಯು ದ.ಕ.ಜಿಲ್ಲೆಯಲ್ಲಿ ಇನ್ನು ಮುಂದೆ ಇಲ್ಲ.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಂಗಳೂರು ಕಚೇರಿಯಲ್ಲಿ ಅಸ್ತಿತ್ವದಲ್ಲಿದ್ದ ಈ ಸಿನಿಚಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಫ್ರಾನ್ಸಿಸ್ ಲೂವಿಸ್ ಅ.31ರಂದು ಸರಕಾರಿ ಸೇವೆಯಿಂದ ನಿವೃತ್ತರಾಗುವುದರೊಂದಿಗೆ ಈ ಹುದ್ದೆಯು ಇನ್ನು ಮುಂದೆ ಜಿಲ್ಲೆಯಲ್ಲಿ ಇರುವುದಿಲ್ಲ. ಅಂದರೆ, ರಾಜ್ಯ ಸರಕಾರದ ಆಡಳಿತ ಸುಧಾರಣಾ ಆಯೋಗದ ಶಿಫಾರಸ್ಸಿನ ಅನ್ವಯ ಈ ಸಿನಿಚಾಲಕ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದವರು ನಿವೃತ್ತರಾಗುವುದರೊಂದಿಗೆ ಹುದ್ದೆಯು ತನ್ನಿಂತಾನೇ ಅಸ್ತಿತ್ವ ಕಳೆದುಕೊಳ್ಳಲಿದೆ.
ಈ ಹಿಂದೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ವಾರ್ತಾ ಇಲಾಖೆಯ ಅಧೀನದಲ್ಲಿ ಸಿನಿಚಾಲಕ ಹುದ್ದೆ ಇತ್ತು. ಸಾರ್ವಜನಿಕರಲ್ಲಿ ವಿವಿಧ ಜಾಗೃತಿ ಮೂಡಿಸಲು, ಸರಕಾರದ ವಿವಿಧ ಯೋಜನೆಗಳ ಮಾಹಿತಿ, ಅರಿವು ಮೂಡಿಸಲು ಜನವಸತಿ ಪ್ರದೇಶಗಳಲ್ಲಿ ರಾಜ್ಯ ಸರಕಾರದಿಂದ ಒದಗಿಸಿದ ಆರೋಗ್ಯ, ಶಿಕ್ಷಣ, ಸ್ವಚ್ಛತೆ, ಸಾಮರಸ್ಯಗಳ, ವಿವಿಧ ಸಾಧಕ ಮಹನೀಯರ ಜೀವನ ಚರಿತ್ರೆಯ ಚಿತ್ರಗಳನ್ನು ಶಾಲಾ ಕಾಲೇಜುಗಳಲ್ಲಿ ಧ್ವನಿವರ್ಧಕ, ರೇಡಿಯೋದಲ್ಲಿ ಸಂದೇಶ ಹರಡುವುದು, ಚಿತ್ರ ಪ್ರದರ್ಶನ, ಸಾಕ್ಷ್ಯಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ ಇವರ ಕರ್ತವ್ಯವಾಗಿತ್ತು.
ಫ್ರಾನ್ಸಿಸ್ ಲೂವಿಸ್ ವಾರ್ತಾ ಮತ್ತು ಪ್ರವಾಸೋದ್ಯಮ ಇಲಾಖೆಯ ಗ್ರಾಮಾಂತರ ರೇಡಿಯೋ ಶಾಖೆಯಲ್ಲಿ ಹಾಸನದ ಸಹಾಯಕ ರೇಡಿಯೋ ಇಂಜಿನಿಯರ್ ಕಚೇರಿಯಲ್ಲಿ 1979ರಲ್ಲಿ ಬ್ಯಾಟರಿ ಸಹಾಯಕರಾಗಿ ಸರಕಾರಿ ಸೇವೆಗೆ ಸೇರ್ಪಡೆಗೊಂಡಿದ್ದರು. ಆಗಿನ ಕಾಲದಲ್ಲಿ ಸಾಮೂಹಿಕ ರೇಡಿಯೋಗಳನ್ನು ಎಲ್ಲಾ ಗ್ರಾಪಂಚಾಗಳಲ್ಲಿ ಸ್ಥಾಪಿಸಿ ಸ್ಥಳೀಯ ಗ್ರಾಮದ ಜನರಿಗೆ ಸುದ್ದಿ, ವಾರ್ತಾ ಪ್ರಸಾರವನ್ನು ತಲುಪಿಸುವ ಸರಕಾರದ ಯೋಜನೆ ಇದಾಗಿತ್ತು. ಇದರೊಂದಿಗೆ ಹಳ್ಳಿಗಳಲ್ಲಿ ಕಿರು ಸಿನಿಮಾ ಪ್ರದರ್ಶನವನ್ನು ಏರ್ಪಡಿಸಲಾಗುತ್ತಿತ್ತು.
ಗ್ರಾಮದ ಕೇಂದ್ರಸ್ಥಾನದಲ್ಲಿ ರೇಡಿಯೋ ಕಟ್ಟೆಯನ್ನು ನಿರ್ಮಿಸಿ ಅದರ ಸುತ್ತ ಗ್ರಾಮಸ್ಥರು ಕುಳಿತು ವಾರ್ತಾ ಪ್ರಸಾರ ಹಾಗೂ ಚಿತ್ರಗೀತೆಗಳನ್ನು ಕೇಳುತ್ತಿದ್ದರು. ರೇಡಿಯೋ ಕೆಟ್ಟು ಹೋದ ಸಂದರ್ಭದಲ್ಲಿ ಇಲಾಖೆಯ ವತಿಯಿಂದಲೇ ಸ್ಥಳದಲ್ಲಿಯೇ ದುರಸ್ತಿಪಡಿಸಿ ಕೊಡುವ ಕೆಲಸ ಇವರದ್ದಾಗಿತ್ತು ಅಥವಾ ರೇಡಿಯೋವನ್ನು ಬದಲಾಯಿಸಿ ಕೊಡಲಾಗುತ್ತಿತ್ತು. ಕೆಲವೊಮ್ಮೆ ಗ್ರಾಮಸ್ಥರು ರೇಡಿಯೋ ಕೇಳದಿದ್ದರೆ ಏನೋ ಕಳೆದುಕೊಂಡಂತೆ ಸಿನಿಚಾಲಕರನ್ನು ಅಪರಾಧಿಯಂತೆ ಕಾಣುತ್ತಿದ್ದರು. ಆಗಿನ ಕಾಲದಲ್ಲಿ ಸಂಚಾರಿ ಬಸ್ಸುಗಳ ವ್ಯವಸ್ಥೆ ಕಡಿಮೆಯಿದ್ದ ಕಾರಣ ಬಾಡಿಗೆ ಸೈಕಲ್ಗಳನ್ನು ಪಡೆದು ಅದರ ಮೂಲಕ ರೇಡಿಯೋಗಳನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಬೇಕಾಗಿತ್ತು.
1982ರಲ್ಲಿ ಮಂಗಳೂರಿನ ರೇಡಿಯೋ ಸುಪರ್ ವೈಸರ್ ಕಚೇರಿಗೆ ವರ್ಗಾವಣೆಗೊಂಡ ಫ್ರಾನ್ಸಿಸ್ ಲೂವಿಸ್ ಅವಿಭಜಿತ ದ.ಕ.ಜಿಲ್ಲೆಯ ಮಂಗಳೂರು, ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಸುಳ್ಯ, ಉಡುಪಿ, ಕುಂದಾಪುರ, ಕಾರ್ಕಳದಲ್ಲಿಯೂ ಇಲಾಖೆಯ ಸಾಮೂಹಿಕ ರೇಡಿಯೋ ಕಾರ್ಯಕ್ರಮವನ್ನು ನಡೆಸಿದ್ದರು. ಆ ನಂತರ ಸರಕಾರವು ಪ್ರವಾಸೋದ್ಯಮ ಇಲಾಖೆಯನ್ನು ಬೇರ್ಪಡಿಸಿ ವಾರ್ತಾ ಮತ್ತು ಪ್ರಚಾರ ಇಲಾಖೆ ಎಂದು ನಾಮಕರಣ ಮಾಡಿತು. ಇಲಾಖೆಯ ಗ್ರಾಮಾಂತರ ರೇಡಿಯೋ ಶಾಖೆಯನ್ನು 1987ರಲ್ಲಿ ಸರಕಾರ ರದ್ದುಗೊಳಿಸಿ, ಸಾಮೂಹಿಕ ದೂರದರ್ಶನಗಳನ್ನು ಪ್ರತಿ ಗ್ರಾಮದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕಾಲನಿಗಳಿಗೆ ಸ್ಥಾಪಿಸುವ ಯೋಜನೆಯನ್ನು ಕೈಗೊಳ್ಳಲಾಯಿತು.
1988ರ ನಂತರ ಸರಕಾರದ ಸೂಚನೆ ಮೇರೆಗೆ ಇಲಾಖೆ ದೂರದರ್ಶನ ಶಾಖೆಯನ್ನು ರದ್ದುಗೊಳಿಸಿ ಈ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಬ್ಬಂದಿಗಳನ್ನು ವಾರ್ತಾ ಇಲಾಖೆಯ ಕ್ಷೇತ್ರ ಪ್ರಚಾರ ಶಾಖೆಗೆ ವಿಲೀನಗೊಳಿಸಿ ಸಿನಿಚಾಲಕರಾಗಿ ಭಡ್ತಿ ನೀಡಿ ಕಾರ್ಯನಿರ್ವಹಿಸಲು ಸೂಚಿಸಲಾಯಿತು. ಆ ನಂತರ ಫ್ರಾನ್ಸಿಸ್ ಲೂವಿಸ್ ಅವರನ್ನು ಬಳ್ಳಾರಿ ಜಿಲ್ಲೆಗೆ ವರ್ಗಾಯಿಸಲಾಯಿತು. ಅಲ್ಲಿ 1988ರಿಂದ 8 ವರ್ಷ ಸೇವೆ ಸಲ್ಲಿಸಿದರು. ನಂತರ 1996ರವರೆಗೆ ಶಿವಮೊಗ್ಗ ಜಿಲ್ಲೆಗೆ ವರ್ಗಾವಣೆಗೊಂಡರು. 1998ರಲ್ಲಿ ದ.ಕ.ಜಿಲ್ಲಾ ವಾರ್ತಾ ಕಚೇರಿಗೆ ಮತ್ತೆ ವರ್ಗಾವಣೆಗೊಂಡರು. ಈ ಹುದ್ದೆಗಳಲ್ಲಿರುವ ನೌಕರರು ವಯೋ ನಿವೃತ್ತಿ ಹೊಂದಿದ ನಂತರ ಹೊಸಬರ ನೇಮಕ ಮಾಡಲಾಗುತ್ತಿಲ್ಲ. ರಾಜ್ಯದ ಕೇವಲ 5-6 ಜಿಲ್ಲೆಗಳಲ್ಲಿ ಮಾತ್ರ ಹಾಲಿ ಸಿನಿಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ.
ಫ್ರಾನ್ಸಿಸ್ ಲೂವಿಸ್ 1979ರಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡಿದ್ದು, 40 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಅ.31ರಂದು ವಯೋ ನಿವೃತ್ತಿ ಹೊಂದಿದರು.







