ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ: ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವು

ಶಿವಮೊಗ್ಗ, ಅ. 31: ಮಳೆ ಬರುತ್ತಿದ್ದ ವೇಳೆ ಚಾಲನೆಯ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ, ಸವಾರ ಹಾಗೂ ಹಿಂಬದಿ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬುಧವಾರ ರಾತ್ರಿ ನಗರದ ಹೊರವಲಯ ಹಸೂಡಿ ಫಾರಂ ಬಳಿ ನಡೆದಿದೆ.
ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಪಲ್ಲನಚಟ್ನಳ್ಳಿ ಗ್ರಾಮದ ನಿವಾಸಿ, ಬೈಕ್ ಚಾಲಕ ಗಿರೀಶ್ (24) ಹಾಗೂ ಹಿಂಬದಿ ಸವಾರ, ಕುಂಕುವ ಗ್ರಾಮದ ಮನೋಜ್ (22) ಮೃತಪಟ್ಟವರೆಂದು ಗುರುತಿಸಲಾಗಿದೆ.
ಇವರು ಹಸೂಡಿ ಫಾರಂ ಗ್ರಾಮದಲ್ಲಿ ಅಡಕೆ ಸಿಪ್ಪೆ ಸುಲಿಯುವ ಕೆಲಸಕ್ಕೆ ಆಗಮಿಸಿದ್ದರು. ಕೆಲಸ ಮುಗಿಸಿಕೊಂಡು ಮನೆಗೆ ಹಿಂದಿರುಗುವ ವೇಳೆ ಮಳೆ ಬರುತ್ತಿದ್ದರಿಂದ, ಚಾಲನೆಯ ನಿಯಂತ್ರಣ ಕಳೆದುಕೊಂಡು ಬೈಕ್ ವಿದ್ಯುತ್ ಕಂಬಕ್ಕೆ ಢಿಕ್ಕಿಯಾಗಿದೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಇಬ್ಬರು ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಘಟನಾ ಸ್ಥಳಕ್ಕೆ ಸಬ್ ಇನ್ಸ್‍ಪೆಕ್ಟರ್ ಭಾರತಿ ಮತ್ತವರ ಸಿಬ್ಬಂದಿಗಳು ಭೇಟಿಯಿತ್ತು ಪರಿಶೀಲಿಸಿದರು. ಈ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





