ಜಮ್ಮು-ಕಾಶ್ಮೀರ ವಿಂಗಡಿಸುವ ಕ್ರಮ ಕಾನೂನುಬಾಹಿರ: ಚೀನಾ

ಬೀಜಿಂಗ್, ಅ. 31: ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಎಂಬ ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸುವ ಭಾರತದ ಕ್ರಮವನ್ನು ಚೀನಾ ಗುರುವಾರ ಖಂಡಿಸಿದೆ ಎಂದು ‘ಗ್ಲೋಬಲ್ ಟೈಮ್ಸ್’ ಪತ್ರಿಕೆ ವರದಿ ಮಾಡಿದೆ.
ಗುರುವಾರ ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿರುವ ಭಾರತದ ಕ್ರಮವು ನಮ್ಮ ಸಾರ್ವಭೌಮತೆಯನ್ನು ಪ್ರಶ್ನಿಸುತ್ತದೆ ಮತ್ತು ಅದು ‘ಕಾನೂನುಬಾಹಿರ ಮತ್ತು ಅಕ್ರಮವಾಗಿದೆ’ ಎಂದು ಚೀನಾ ಹೇಳಿದೆ.
ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ ಸಂವಿಧಾನದ 370ನೇ ವಿಧಿಯನ್ನು ಭಾರತವು ಆಗಸ್ಟ್ 5ರಂದು ರದ್ದುಪಡಿಸಿದೆ. ಅದೇ ದಿನ ಸಂಸತ್ತು, ಅಕ್ಟೋಬರ್ 31ರಿಂದ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ಜಮ್ಮು ಮತ್ತು ಕಾಶ್ಮೀರ ಪುನರ್ವಿಂಗಡಣೆ ಮಸೂದೆಯನ್ನು ಅಂಗೀಕರಿಸಿತು. ಇದಕ್ಕೂ ಮೊದಲು, ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ರದ್ದುಪಡಿಸುವ ಭಾರತದ ಕ್ರಮವನ್ನು ಚೀನಾವು ಪಾಕಿಸ್ತಾನದ ಜೊತೆ ಸೇರಿ ವಿರೋಧಿಸಿತ್ತು.
‘‘ಆಂತರಿಕ ಕಾನೂನು ಮತ್ತು ಆಡಳಿತಾತ್ಮಕ ವಿಭಜನೆಯನ್ನು ಪರಿಷ್ಕರಿಸುವ ಭಾರತದ ಏಕಪಕ್ಷೀಯ ಕ್ರಮವು ಚೀನಾದ ಸಾರ್ವಭೌಮತ್ವವನ್ನು ಪ್ರಶ್ನಿಸುತ್ತದೆ ಹಾಗೂ ಅದು ಕಾನೂನುಬಾಹಿರವಾಗಿದೆ ಹಾಗೂ ಅಕ್ರಮವಾಗಿದೆ’’ ಎಂದು ಚೀನಾದ ವಿದೇಶ ಸಚಿವಾಲಯದ ವಕ್ತಾರ ಗೆಂಗ್ ಶುವಾಂಗ್ ಪತ್ರಿಕಾಗೋಷ್ಠಿಯೊಂದರಲ್ಲಿ ಹೇಳಿದರು.
ಅದು ಈ ವಲಯದ ಮೇಲೆ ಚೀನಾ ಹೊಂದಿರುವ ನಿಯಂತ್ರಣವನ್ನು ಬದಲಾಯಿಸುವುದಿಲ್ಲ ಎಂದರು.





