ಟಿಬೆಟಿಯನ್ನರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಾರತದ ಬೆಂಬಲ ಪ್ರಶಂಸಿಸಿದ ಅಮೆರಿಕ
ವಾಶಿಂಗ್ಟನ್, ಅ. 31: ಟಿಬೆಟಿಯನ್ನರ ಧಾರ್ಮಿಕ ಸ್ವಾತಂತ್ರಕ್ಕೆ ಬೆಂಬಲ ನೀಡುವ ನಿಟ್ಟಿನಲ್ಲಿ ‘ಅಸಾಧಾರಣ ಔದಾರ್ಯ’ ತೋರಿಸಿರುವ ಭಾರತವನ್ನು ಅಮೆರಿಕ ಅಭಿನಂದಿಸಿದೆ. ಅದೇ ವೇಳೆ, ದಲಾಯಿ ಲಾಮಾರ ಉತ್ತರಾಧಿಕಾರಿಯನ್ನು ಚೀನಾದ ಕಾನೂನು ಮತ್ತು ನಿಯಮಾವಳಿಗಳಿಗೆ ಅನುಗುಣವಾಗಿ ಆರಿಸಬೇಕು ಎಂಬ ಚೀನಾದ ವಾದದಲ್ಲಿ ಯಾವುದೇ ಹುರುಳಿಲ್ಲ ಎಂದು ಅದು ಹೇಳಿದೆ.
ಅಂತರ್‌ರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರಕ್ಕಾಗಿನ ಅಮೆರಿಕದ ರಾಯಭಾರಿ ಸ್ಯಾಮ್ ಬ್ರೌನ್‌ಬ್ಯಾಕ್‌ರನ್ನು ಸೋಮವಾರ ಭಾರತದ ಧರ್ಮಶಾಲಾದಲ್ಲಿ ಭೇಟಿಯಾದರು. ಟಿಬೆಟಿಯನ್ನರ ಧರ್ಮದ ಮೇಲೆ ಚೀನಾ ನಡೆಸುತ್ತಿರುವ ‘ದಬ್ಬಾಳಿಕೆ’ಯನ್ನು ಅವರು ಖಂಡಿಸಿದರು ಹಾಗೂ ತಮ್ಮದೇ ಆದ ಧಾರ್ಮಿಕ ನಾಯಕರನ್ನು ಆರಿಸುವ ಹಕ್ಕು ಟಿಬೆಟಿಯನ್ನರಿಗಿದೆ ಎಂದು ಹೇಳಿದರು.
ಟಿಬೆಟಿಯನ್ನರ ಆಧ್ಯಾತ್ಮಿಕ ಗುರು ದಲಾಯಿ ಲಾಮಾರನ್ನು ಬ್ರೌನ್‌ಬ್ಯಾಕ್ ಧರ್ಮಶಾಲಾದಲ್ಲಿ ಭೇಟಿಯಾಗಿರುವುದು ಟಿಬೆಟಿಯನ್ನರಿಗೆ ಅಮೆರಿಕ ನೀಡುತ್ತಿರುವ ನಿರಂತರ ಬೆಂಬಲದ ದ್ಯೋತಕವಾಗಿದೆ ಎಂದು ದಕ್ಷಿಣ ಮತ್ತು ಮಧ್ಯ ಏಶ್ಯಕ್ಕಾಗಿನ ಅಮೆರಿಕದ ಉಸ್ತುವಾರಿ ಸಹಾಯಕ ವಿದೇಶಾಂಗ ಕಾರ್ಯದರ್ಶಿ ಆ್ಯಲಿಸ್ ವೆಲ್ಸ್ ನುಡಿದರು.
‘‘ಟಿಬೆಟ್‌ನ ಧಾರ್ಮಿಕ ಸ್ವಾತಂತ್ರವನ್ನು ಭಾರತ ಅಗಾಧ ಪ್ರಮಾಣದಲ್ಲಿ ಬೆಂಬಲಿಸಿದೆ ಹಾಗೂ ಭಾರತದ ಔದಾರ್ಯವನ್ನು ಅಮೆರಿಕ ಪ್ರಶಂಸಿಸುತ್ತದೆ’’ ಎಂದು ವೆಲ್ಸ್ ಟ್ವೀಟ್ ಮಾಡಿದ್ದಾರೆ.