ಮಂಚೇನಹಳ್ಳಿ ತಾಲೂಕು ರಚನೆಗೆ ಸಂಪುಟ ಅಸ್ತು

ಬೆಂಗಳೂರು, ಅ. 31: ಚಿಕ್ಕಬಳ್ಳಾಪುರ ಜಿಲ್ಲೆಯ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರಿಗೆ ಉಪಚುನಾವಣೆಗೆ ಮೊದಲೇ ವಿಶೇಷ ಕೊಡುಗೆ ನೀಡಿದ್ದು, ರಾಜ್ಯ ಸರಕಾರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಮಂಚೇನಹಳ್ಳಿ ಹೋಬಳಿಯನ್ನು ತಾಲೂಕು ರಚನೆಗೆ ತೀರ್ಮಾನಿಸಿದೆ.
ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯಲ್ಲಿ ಗೌರಿಬಿದನೂರಿನ ಮಂಚೇನಹಳ್ಳಿಯನ್ನು ಪ್ರತ್ಯೇಕ ತಾಲೂಕು ರಚನೆಗೆ ಸಚಿವ ಸಂಪುಟ ಸಭೆ ಸಮ್ಮತಿಸಿದೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ರಾಜ್ಯ ಸರಕಾರದ ಘೋಷಣೆಗೂ ಮೊದಲೇ ಅನರ್ಹ ಶಾಸಕ ಡಾ.ಕೆ.ಸುಧಾಕರ್ ಅವರು, ಸಿಎಂ ಯಡಿಯೂರಪ್ಪ, ಕಂದಾಯ ಸಚಿವ ಆರ್.ಅಶೋಕ್ ಹಾಗೂ ರಾಜ್ಯ ಸರಕಾರಕ್ಕೆ ಟ್ವಿಟ್ಟರ್ ಮೂಲಕ ಧನ್ಯವಾದಗಳನ್ನು ಅರ್ಪಿಸಿದ್ದು, ಮಂಚೇನಹಳ್ಳಿ ಜನತೆ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ಹೇಳಿದ್ದಾರೆ.
‘ಮಂಚೇನಹಳ್ಳಿ ಹೊಸ ತಾಲೂಕು ಘೋಷಣೆ ವಿಷಯದಲ್ಲಿ ಸಹಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಕಂದಾಯ ಸಚಿವ ಆರ್.ಅಶೋಕ್ ಅವರಿಗೆ, ರಾಜ್ಯ ಸಚಿವ ಸಂಪುಟದ ಎಲ್ಲ ಸಚಿವರುಗಳಿಗೆ, ಸಂಬಂಧಪಟ್ಟ ಎಲ್ಲ ಅಧಿಕಾರಿಗಳಿಗೆ ಹಾಗೂ ಹೊಸ ತಾಲೂಕಿಗಾಗಿ ಸುದೀರ್ಘಾವಧಿಯ ಹೋರಾಟ ನಡೆಸಿದ ನನ್ನ ಮಂಚೇನಹಳ್ಳಿಯ ಜನತೆಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ’
-ಡಾ.ಕೆ.ಸುಧಾಕರ್, ಅನರ್ಹ ಶಾಸಕ







