ಮುಖಕ್ಕೆ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದ ಲಿಟನ್ ದಾಸ್
ದಿಲ್ಲಿಯಲ್ಲಿ ವಾಯು ಮಾಲಿನ್ಯ

ಹೊಸದಿಲ್ಲಿ, ಅ.31: ದಿಲ್ಲಿಯಲ್ಲಿ ವಿಪರೀತ ವಾಯುಮಾಲಿನ್ಯದ ಆತಂಕ ಹೆಚ್ಚಾಗುತ್ತಿರುವ ಮಧ್ಯೆ ಬಾಂಗ್ಲಾದೇಶದ ಬ್ಯಾಟ್ಸ್‌ಮನ್ ಲಿಟನ್ ದಾಸ್ ಇಲ್ಲಿನ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ ಮುಖಕ್ಕೆ ಮಾಸ್ಕ್ ಧರಿಸಿ ಅಭ್ಯಾಸ ನಡೆಸಿದರು. ಮುಶ್ಫಿಕುರ್ರಹೀಂ ಹಾಗೂ ಮುಸ್ತಫಿಝುರ್ರಹ್ಮಾನ್ ಮೈದಾನದಲ್ಲಿ ಅಭ್ಯಾಸ ನಿರತರಾಗಿದ್ದರು. ಆದರೆ ಇವರಿಬ್ಬರು ಮಾಸ್ಕ್ ಧರಿಸಿರಲಿಲ್ಲ.
ದಿಲ್ಲಿಯ ವಾಯು ಶುದ್ಧತೆ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ದೇಶದ ವಿವಿಧ ನಗರಗಳ ವಿಭಾಗದಲ್ಲಿ ಕೆಳಸ್ಥಾನಕ್ಕೆ ಜಾರಿದೆ. ಕೆಲವರು ದಿಲ್ಲಿ ಪಂದ್ಯವನ್ನು ಸ್ಥಳಾಂತರಗೊಳಿಸುವಂತೆ ಬಿಸಿಸಿಐಗೆ ಮನವಿ ಮಾಡುತ್ತಿದ್ದಾರೆ.
ದಿಲ್ಲಿಯಲ್ಲಿ ನಡೆಯಲಿರುವ ಮೊದಲ ಟ್ವೆಂಟಿ-20 ಪಂದ್ಯ ನಿಗದಿಯಂತೆಯೇ ನಡೆಯಲಿದೆ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗುಲಿ ದೃಢಪಡಿಸಿದ್ದಾರೆ.
ಮಾಲಿನ್ಯದ ಮಟ್ಟ ನಿಯಂತ್ರಣಕ್ಕೆ ಬರುವ ತನಕ ನಗರದಲ್ಲಿ ಪಂದ್ಯವನ್ನು ಆಯೋಜಿಸಲೇಬಾರದು ಎಂದು ಭಾರತದ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.
ದಿಲ್ಲಿಯ ಜನತೆಗಿಂತ ಯಾವುದೇ ಪಂದ್ಯ ಅಥವಾ ಕ್ರೀಡಾ ಸ್ಪರ್ಧೆಗಳು ದೊಡ್ಡದಲ್ಲ.ಮಾಲಿನ್ಯದ ಮಟ್ಟ ನಿಯಂತ್ರಣಕ್ಕೆ ಬರುವ ತನಕ ದಿಲ್ಲಿಯಲ್ಲಿ ಯಾವುದೇ ಪಂದ್ಯ ನಡೆಯಲಾರದು ಎನ್ನುವುದು ನನ್ನ ನಂಬಿಕೆ ಎಂದು ಗಂಭೀರ್ ಸುದ್ದಿಸಂಸ್ಥೆ ಎಎನ್‌ಐಗೆ ತಿಳಿಸಿದರು.
ಭಾರತ ಹಾಗೂ ಬಾಂಗ್ಲಾದೇಶ ಮಧ್ಯ ನಡೆಯಲಿರುವ ಮೂರು ಪಂದ್ಯಗಳ ಟ್ವೆಂಟಿ-20 ಸರಣಿಯ ಮೊದಲ ಪಂದ್ಯ ನ.3ರಂದು ಅರುಣ್‌ಜೇಟ್ಲಿ ಸ್ಟೇಡಿಯಂನಲ್ಲಿ ನಡೆಯಲಿದೆ.







