ಮಾನಸಿಕ ಆರೋಗ್ಯ ಸಮಸ್ಯೆ:ಕ್ರಿಕೆಟ್‌ನಿಂದ ಮ್ಯಾಕ್ಸ್‌ವೆಲ್ ವಿಶ್ರಾಂತಿ

ಮೆಲ್ಬೋರ್ನ್,ಅ.31: ಮಾನಸಿಕ ಆರೋಗ್ಯ ಸಮಸ್ಯೆಯಿಂದ ಹೊರಬರಲು ಆಸ್ಟ್ರೇಲಿಯದ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಕ್ರಿಕೆಟ್‌ನಿಂದ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಕ್ರಿಕೆಟ್ ಆಸ್ಟ್ರೇಲಿಯ ಅಡಳಿತ ಮಂಡಳಿ ಗುರುವಾರ ತಿಳಿಸಿದೆ. ಗ್ಲೆನ್ ಮ್ಯಾಕ್ಸ್‌ವೆಲ್ ತನ್ನ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿ ಸ್ವಲ್ಪ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಹೀಗಾಗಿ ಅವರು ಕ್ರಿಕೆಟ್‌ನಿಂದ ಸ್ವಲ್ಪ ಸಮಯ ದೂರ ಉಳಿಯಲಿದ್ದಾರೆ ಎಂದು ತಂಡದ ಮನೋವೈದ್ಯ ಮೈಕಲ್ ಲಾಯ್ಡಾ ಹೇಳಿದ್ದಾರೆ.
31ರ ಹರೆಯದ ಮ್ಯಾಕ್ಸ್‌ವೆಲ್ ಈಗ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲೆರಡು ಪಂದ್ಯಗಳಲ್ಲಿ ಆಡಿದ್ದಾರೆ. ರವಿವಾರ ನಡೆದ ಮೊದಲ ಪಂದ್ಯದಲ್ಲಿ ಅರ್ಧಶತಕ ದಾಖಲಿಸಿ ಉತ್ತಮ ಫಾರ್ಮ್‌ನಲ್ಲಿದ್ದಂತೆ ಕಂಡುಬಂದಿದ್ದರು. ಟ್ವೆಂಟಿ-20 ತಂಡದಲ್ಲಿ ಮ್ಯಾಕ್ಸ್‌ವೆಲ್ ಅವರಿಂದ ತೆರವಾದ ಸ್ಥಾನವನ್ನು ಇನ್ನೋರ್ವ ಆಲ್‌ರೌಂಡರ್ ಡಿಆರ್ಕಿ ಶಾರ್ಟ್ ತುಂಬಲಿದ್ದಾರೆ.
‘‘ಮ್ಯಾಕ್ಸ್‌ವೆಲ್ ಓರ್ವ ವಿಶೇಷ ಆಟಗಾರ ಹಾಗೂ ಆಸ್ಟ್ರೇಲಿಯ ಕ್ರಿಕೆಟ್ ಕುಟುಂಬದ ಪ್ರಮುಖ ಸದಸ್ಯರಾಗಿದ್ದಾರೆ. ಅವರನ್ನು ಆದಷ್ಟು ಬೇಗನೆ ತಂಡದಲ್ಲಿ ಮತ್ತೆ ಕಾಣುವ ವಿಶ್ವಾಸದಲ್ಲಿದ್ದೇವೆ’’ ಎಂದು ಕ್ರಿಕೆಟ್ ಆಸ್ಟ್ರೇಲಿಯದ ಪ್ರದಾನ ಪ್ರಬಂಧಕ ಬೆನ್ ಒಲಿವೆರ್ ಹೇಳಿದ್ದಾರೆ.





