ಅಕ್ರಮ ಬಾಂಗ್ಲಾ ವಲಸಿಗರ ಜಾಮೀನು ಅರ್ಜಿ: ಕೈಗೊಂಡಿರುವ ಕ್ರಮದ ಬಗ್ಗೆ ಮಾಹಿತಿ ನೀಡಲು ಹೈಕೋರ್ಟ್ ಸೂಚನೆ

ಬೆಂಗಳೂರು, ಅ.31: ಅಕ್ರಮ ಬಾಂಗ್ಲಾ ವಲಸಿಗರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನು ಪ್ರತ್ಯೇಕ ಡಿಟೆನ್ಷನ್ ಸೆಂಟರ್‌ನಲ್ಲಿಟ್ಟು ಗೌರವಯುತವಾಗಿ ನಡೆಸಿಕೊಳ್ಳುವುದು ಸೇರಿ ಯಾವ್ಯಾವ ಕ್ರಮ ಕೈಗೊಂಡಿದ್ದೀರಿ ಎಂಬುದರ ಕುರಿತು ಅಗತ್ಯ ಸಲಹೆ, ಮಾಹಿತಿ ನೀಡಲು ಕೇಂದ್ರ, ರಾಜ್ಯ ಸರಕಾರಕ್ಕೆ ಹೈಕೋರ್ಟ್ ಸೂಚಿಸಿದೆ.
ಜಾಮೀನು ಕೋರಿ ಬಂಧಿತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯಿತು. ನ್ಯಾಯಪೀಠವು ವಿದೇಶಿಗರ ಅಕ್ರಮ ವಾಸ ಪ್ರಕರಣಗಳನ್ನು ನ್ಯಾಯಾಲಯ ಹೇಗೆ ನಿಭಾಯಿಸಬೇಕು. ಈ ಸಂಬಂಧ ಕೇಂದ್ರ ಸರಕಾರದ ನಿಯಮಗಳೇನು. ನಿಯಮಗಳ ಅನ್ವಯ ಯಾವ್ಯಾವ ರಾಜ್ಯಗಳಲ್ಲಿ ಯಾವ್ಯಾವ ಕ್ರಮ ತೆಗೆದುಕೊಳ್ಳಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ವಿದೇಶಿಗರು ಬಂದು ವಾಸವಾಗಿರುತ್ತಾರೆ. ವಿದೇಶಿಗರನ್ನೂ ಕೂಡ ಗೌರವಯುತವಾಗಿ ನಡೆಸಿಕೊಳ್ಳಬೇಕು. ಅವರನ್ನು ಜೈಲಿನಲ್ಲಿಡದೇ ಪ್ರತ್ಯೇಕ ಡಿಟೆನ್ಷನ್ ಸೆಂಟರ್‌ಗಳಲ್ಲಿ ಇಟ್ಟು ಗೌರವಯುತ ಜೀವನಕ್ಕೆ ಅವಕಾಶ ಇದೆಯಾ ಎಂಬುದರ ಕುರಿತು ಮಾಹಿತಿ ನೀಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿಕೆ ಮಾಡಿದೆ.
ಪ್ರಕರಣವೇನು: ಆನೇಕಲ್ ತಾಲೂಕಿನ ಕೊಮ್ಮಸಂದ್ರದಲ್ಲಿ ವಾಸವಾಗಿದ್ದ 12 ಮಂದಿ ಬಾಂಗ್ಲಾ ವಲಸಿಗರನ್ನು ಬಂಧಿಸಲಾಗಿತ್ತು. ಇವರೆಲ್ಲರೂ ಈಗ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.





