ಶಿವಮೊಗ್ಗ: ಆರ್‌ಸಿಇಪಿ ವಿರೋಧಿಸಿ ರೈತ ಸಂಘ ಪ್ರತಿಭಟನೆ

ಶಿವಮೊಗ್ಗ, ಅ. 31: ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ (ಆರ್‌ಸಿಇಪಿ) ಮುಕ್ತ ವ್ಯಾಪಾರ ಒಪ್ಪಂದ ವಿರೋಧಿಸಿ ಮತ್ತು ಇದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕದಂತೆ ಆಗ್ರಹಿಸಿ, ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ರೈತ ಸಂಘ ಹಾಗೂ ಹಸಿರು ಸೇನೆಯು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ಮೂಲಕ ಪ್ರಧಾನಮಂತ್ರಿಗೆ ಮನವಿ ಪತ್ರ ಅರ್ಪಿಸಿತು.
ಮುಕ್ತ ವ್ಯಾಪಾರ ನೀತಿಯಡಿ, ಕೇಂದ್ರ ಸರ್ಕಾರವು ಏಷ್ಯಾ ಖಂಡದ 15 ದೇಶಗಳೊಂದಿಗೆ ಸೇರಿ ರೆಸೆಪ್ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಲು ಸಿದ್ದತೆ ನಡೆಸಿದೆ. ನವೆಂಬರ್ 4 ರಂದು ಒಪ್ಪಂದಕ್ಕೆ ಸಹಿ ಹಾಕಲು ಕೂಡ ವೇದಿಕೆ ಸಿದ್ದವಾಗಿದೆ. ಆದರೆ ಈ ಒಪ್ಪಂದವು ರೈತ ಸಮುದಾಯದ ವಿರೋಧಿಯಾಗಿದೆ. ಕೃಷಿ ಹಾಗೂ ಇತರೆ ಉಪ ಕಸಬುಗಳ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.
ಈ ಒಪ್ಪಂದ ಮಾಡಿಕೊಳ್ಳುವುದರಿಂದ ಬಹುತೇಕ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕ ಶಾಶ್ವತವಾಗಿ ಶೂನ್ಯಕ್ಕೆ ತರುತ್ತದೆ. ಅನೇಕ ದೇಶಗಳು ತಮ್ಮ ಹೆಚ್ಚುವರಿ ಕೃಷಿ ಉತ್ಪನ್ನಗಳನ್ನು ನಮ್ಮ ದೇಶದಲ್ಲಿ ಮಾರಾಟ ಮಾಡಲು ಅನುಕೂಲವಾಗುತ್ತದೆ. ಇದರಿಂದ ದೇಶದ ಕೋಟ್ಯಾಂತರ ರೈತರು ಸಂಕಷ್ಟಕ್ಕೆ ಗುರಿಯಾಗುತ್ತಾರೆ. ವಿಶೇಷವಾಗಿ ಹೈನುಗಾರಿಕೆ ಕ್ಷೇತ್ರಕ್ಕೆ ತೀವ್ರ ಅಪಾಯ ಒದಗಲಿದೆ. ಅಡಕೆ, ರೇಷ್ಮೆ, ತೋಟಗಾರಿಕೆ, ಸಾಂಬಾರು ಉತ್ಪನ್ನಗಳ ಮೇಲೂ ಪರಿಣಾಮ ಬೀರಿ ರೈತರ ಬದುಕೇ ನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನೇಕ ದೇಶಗಳು ಈಗಾಗಲೇ ತಮ್ಮ ದೇಶದಲ್ಲಿ ಹೆಚ್ಚು ಉತ್ಪಾದನೆಯಾಗುತ್ತಿರುವ ಹಾಲನ್ನು ಉತ್ಪಾದಕರಿಂದ ಖರೀದಿಸಿ, ಸಮುದ್ರಕ್ಕೆ ಎಸೆಯುತ್ತಿದೆ. ಈ ಒಪ್ಪಂದದಿಂದ ಅವರು ತುಂಬಾ ಕಡಿಮೆ ಬೆಲೆಯಲ್ಲಿ ಹಾಲು ಉತ್ಪನ್ನಗಳನ್ನು ನಮ್ಮ ದೇಶದ ಮಾರುಕಟ್ಟೆಗೆ ತಂದು ಸುರಿಯುತ್ತಾರೆ. ಇದರಿಂದ ಹಾಲು ನಂಬಿಕೊಂಡು ಜೀವನ ಕಟ್ಟಿಕೊಂಡವರು ಬೀದಿಪಾಲಾಗುವ ಆತಂಕವಿದೆ. ಜೊತೆಗೆ ಕಳಪೆ ಹಾಲು ಕೂಡ ದೇಶ ಪ್ರವೇಶಿಸಿ, ನಾನಾ ರೀತಿಯ ಅನಾರೋಗ್ಯ ಸ್ಥಿತಿ ಉಂಟು ಮಾಡುವ ಸಾಧ್ಯತೆಗಳಿವೆ. ಈ ಎಲ್ಲ ಕಾರಣಗಳಿಂದ ಭಾರತ ಸರ್ಕಾರವು ರೆಸೆಪ್ ಒಪ್ಪಂದಕ್ಕೆ ಸಹಿ ಹಾಕಬಾರದು. ಒಂದು ವೇಳೆ ಸಹಿ ಹಾಕಿದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಪ್ರತಿಭಟನೆಯಲ್ಲಿ ಸಂಘಟನೆಯ ಮುಖಂಡರಾದ ಹೆಚ್.ಆರ್.ಬಸವರಾಜಪ್ಪ, ಕಡಿದಾಳು ಶಾಮಣ್ಣ, ರಾಘವೇಂದ್ರ, ರಾಜು, ಚಂದ್ರಪ್ಪ, ರಾಮಚಂದ್ರಪ್ಪ, ಈಶಣ್ಣ ಸೇರಿದಂತೆ ಮೊದಲಾದವರಿದ್ದರು.







