ಶುಕ್ರವಾರದಿಂದ ಭಾರತದ ಹಾಕಿಗೆ ಒಲಿಂಪಿಕ್ಸ್ ಅರ್ಹತಾ ಪರೀಕ್ಷೆ
ಪುರುಷರ ತಂಡಕ್ಕೆ ರಶ್ಯ, ಮಹಿಳಾ ತಂಡಕ್ಕೆ ಅಮೆರಿಕದ ಸವಾಲು

ಹೊಸದಿಲ್ಲಿ, ಅ.31: ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದ ಬಾಗಿಲಲ್ಲಿ ನಿಂತಿರುವ ಭಾರತೀಯ ಪುರುಷ ಮತ್ತು ಮಹಿಳಾ ಹಾಕಿ ತಂಡಗಳು 2020ರ ಟೋಕಿಯೊ ಒಲಿಂಪಿಕ್ಸ್‌ಗೆ ಟಿಕೆಟ್ ಕಾಯ್ದಿರಿಸಲು ಕೇವಲ ಎರಡು ಹೆಜ್ಜೆಗಳನ್ನು ಮುಂದಿಡಬೇಕಾಗಿದೆ. ಮನ್‌ಪ್ರೀತ್ ಸಿಂಗ್ ನೇತೃತ್ವದ ಪುರುಷರ ತಂಡ ಮತ್ತು ರಾಣಿ ರಾಂಪಾಲ್ ನೇತೃತ್ವದ ಮಹಿಳೆಯರ ತಂಡ ಶುಕ್ರವಾರ ಭುವನೇಶ್ವರದಲ್ಲಿ ಆರಂಭವಾಗಲಿರುವ ಒಲಿಂಪಿಕ್ಸ್‌ನ ಅರ್ಹತಾ ಪಂದ್ಯಗಳಲ್ಲಿ ಅನುಕ್ರಮವಾಗಿ ರಶ್ಯ ಮತ್ತು ಅಮೆರಿಕ ತಂಡವನ್ನು ಎದುರಿಸಲಿವೆ.
ಒಡಿಶಾದ ರಾಜಧಾನಿ ಭುವನೇಶ್ವರದ ಕಳಿಂಗಾ ಕ್ರೀಡಾಂಗಣದಲ್ಲಿ ನವೆಂಬರ್ 1 ಮತ್ತು 2 ರಂದು ನಡೆಯುವ ಪಂದ್ಯಗಳಲ್ಲಿ ಟೋಕಿಯೊ ಒಲಿಂಪಿಕ್ಸ್ ಗೆ ಟಿಕೆಟ್ ಪಡೆಯಲು ಹೋರಾಟ ನಡೆಸಬೇಕಾಗಿದೆ.
ಭಾರತದ ಪುರುಷರ ತಂಡಕ್ಕೆ ರಶ್ಯ ಮತ್ತು ಮಹಿಳಾ ತಂಡಕ್ಕೆ ಅಮೆರಿಕದ ಕಠಿಣ ಸವಾಲು ನಿರೀಕ್ಷಿಸಲಾಗಿದೆ. ಮಹಿಳಾ ತಂಡ ಉತ್ತಮವಾಗಿ ಆಡುತ್ತಿದೆ. ನಾಯಕಿ ರಾಣಿ ರಾಂಪಾಲ್ ಮತ್ತು ಉಪ ನಾಯಕಿ ಸವಿತಾ ಅವರಂತಹ ಪ್ರಮುಖ ಪ್ರತಿಭಾವಂತ ಆಟಗಾರ್ತಿಯರನ್ನು ಒಳಗೊಂಡ ತಂಡದಲ್ಲಿ ಡ್ರ್ಯಾಗ್ ಫ್ಲಿಕರ್ ಗುರ್ಜಿತ್ ಕೌರ್ ಮತ್ತು ಫಾರ್ವರ್ಡ್ ಲಾಲ್ರೆಮ್ಸಿಯಾಮಿ ಇದ್ದಾರೆ.
ಪುರುಷರ ತಂಡದ ಶಕ್ತಿ: ಕಳೆದ 12 ತಿಂಗಳುಗಳಲ್ಲಿ ಭಾರತ ತಂಡದ ರಕ್ಷಣಾ ವ್ಯವಸ್ಥೆಯಲ್ಲಿ ಸುಧಾರಣೆಯಾಗಿದ್ದು, ಜೂನಿಯರ್ ವಿಶ್ವಕಪ್ ವಿಜೇತ ಹರ್ಮನ್‌ಪ್ರೀತ್ ಸಿಂಗ್ ತಂಡಕ್ಕೆ ಸೇರ್ಪಡೆಗೊಂಡ ಬಳಿಕ ಈ ಬದಲಾವಣೆಯಾಗಿದೆ. ವಿಶ್ವಾಸಾರ್ಹ ಸುರೇಂದರ್ ಕುಮಾರ್,ಅನುಭವಿ ರೂಪಿಂದರ್ ಪಾಲ್ ಸಿಂಗ್ ಮತ್ತು ಹರ್ಮನ್‌ಪ್ರೀತ್ ಅವರೊಂದಿಗೆ ಭಾರತದ ತಳಮಟ್ಟದ ಕೊರತೆಯ ಸ್ಥಿರತೆಯನ್ನು ಒದಗಿಸಿದ್ದಾರೆ. 23 ವರ್ಷದ ಹರ್ಮನ್‌ಪ್ರೀತ್ 100 ಕ್ಕೂ ಹೆಚ್ಚು ಅಂತರ್‌ರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಮನ್‌ಪ್ರೀತ್ ಸಿಂಗ್ ಮಾರ್ಗದರ್ಶನದಲ್ಲಿ ಬೆಳೆಯುತ್ತಿದ್ದಾರೆ. ಟೋಕಿಯೊದಲ್ಲಿ ಕೆಲವು ತಿಂಗಳ ಹಿಂದೆ ನಡೆದ ನಾಲ್ಕು ರಾಷ್ಟ್ರಗಳ ಒಲಿಂಪಿಕ್ಸ್ ಟೆಸ್ಟ್ ಸ್ಪರ್ಧೆಯಲ್ಲಿ ಮನ್‌ಪ್ರೀತ್ ಸಿಂಗ್ ಅವರ ಅನುಪಸ್ಥಿತಿಯಲ್ಲಿ ಭಾರತ ಜಯ ಗಳಿಸಿತ್ತು.
24ರ ಹರೆಯದ ಮನ್‌ದೀಪ್ ಸಿಂಗ್ ಅವರು ಹರ್ಮನ್‌ಪ್ರೀತ್ ಅವರಂತೆ 2016ರಲ್ಲಿ ಜೂನಿಯರ್ ವಿಶ್ವಕಪ್ ಗೆದ್ದ ತಂಡದ ಸದಸ್ಯರಾಗಿದ್ದಾರೆ.
ಭಾರತದ ಪುರುಷರ ತಂಡ: ಮನ್‌ಪ್ರೀತ್ ಸಿಂಗ್ (ನಾಯಕ ), ಎಸ್.ವಿ.ಸುನೀಲ್ (ಉಪನಾಯಕ), ಪಿ.ಆರ್.ಶ್ರೀಜೇಶ್, ಕ್ರಿಶನ್ ಬಹದ್ದೂರ್ ಪಾಠಕ್, ಹರ್ಮನ್‌ಪ್ರೀತ್ ಸಿಂಗ್, ವರುಣ್ ಕುಮಾರ್, ಸುರೇಂದರ್ ಕುಮಾರ್, ಗುರಿಂದರ್ ಸಿಂಗ್, ರೂಪಿಂದರ್ ಪಾಲ್ ಸಿಂಗ್, ಅಮಿತ್ ರೋಹಿದಾಸ್, ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ವಿವೇಕ್‌ಸಾಗರ್ ಪ್ರಸಾದ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್‌ದೀಪ್ ಸಿಂಗ್, ಆಕಾಶ್‌ದೀಪ್ ಸಿಂಗ್, ರಮಣ್‌ದೀಪ್ ಸಿಂಗ್, ಸಿಮ್ರನ್‌ಜಿತ್ ಸಿಂಗ್.
ಗುರ್ಜಿತ್ ಕೌರ್ ಸ್ಟಾರ್ ಆಟಗಾರ್ತಿ: 24ರ ಹರೆಯದ ಗುರ್ಜಿತ್ ಕೌರ್ ಅವರು 2016ರ ರಿಯೊ ಒಲಿಂಪಿಕ್ಸ್‌ನಿಂದ ಭಾರತದ ಮಹಿಳಾ ಹಾಕಿ ತಂಡದ ಅತ್ಯಂತ ಪ್ರಭಾವಶಾಲಿ ಆಟಗಾರ್ತಿಯಾಗಿ ಬೆಳೆದಿದ್ದಾರೆ. ಈ ವರ್ಷ ಹಿರೋಶಿಮಾದಲ್ಲಿ ನಡೆದ ಎಫ್‌ಐಎಚ್ ಮಹಿಳಾ ಹಾಕಿ ಸಿರೀಸ್ ಫೈನಲ್ ಅಭಿಯಾನದಲ್ಲಿ 11 ಗೋಲು ಗಳಿಸಿದ್ದರು. ಗುರ್ಜಿತ್ ಒಂದೇ ಅಂತರ್‌ರಾಷ್ಟ್ರೀಯ ಪಂದ್ಯಾವಳಿಯಲ್ಲಿ 10 ಅಥವಾ ಹೆಚ್ಚಿನ ಗೋಲುಗಳನ್ನು ಗಳಿಸಿದ ಐದನೇ ಭಾರತೀಯ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು 2018ರ ಏಷ್ಯನ್ ಗೇಮ್ಸ್ ಮತ್ತು ಏಷ್ಯನ್ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ಬೆಳ್ಳಿ ಪದಕ ಗೆದ್ದ ತಂಡದಲ್ಲಿದ್ದರು.
ಮಹಿಳಾ ತಂಡ: ರಾಣಿ ರಾಂಪಾಲ್ (ನಾಯಕಿ), ಸವಿತಾ (ಉಪನಾಯಕಿ), ರಜನಿ ಎಟಿಮಾರ್ಪು, ದೀಪಾ ಗ್ರೇಸ್ ಎಕ್ಕಾ, ಗುರ್ಜಿತ್ ಕೌರ್, ರೀನಾ ಖೋಖರ್, ಸಲೀಮಾ ಟೆಟೆ, ಸುಶೀಲಾ ಚಾನು ಪುಖ್ರಾಂಬಮ್, ನಿಕ್ಕಿ ಪ್ರಧಾನ್, ಮೋನಿಕಾ, ನೇಹಾ ಗೋಯಲ್, ಲಿಲಿಮಾ ಮಿನ್ಜ್, ನಮಿತಾ ಟೊಪ್ಪೊ ,ವಂದನಾ ಕಟಾರಿಯಾ, ನವನೀತ್ ಕೌರ್, ಲಾಲ್ರೆಮ್ಸಿಯಾಮಿ, ನವಜೋತ್ ಕೌರ್, ಶರ್ಮಿಳಾ ದೇವಿ.







