ಸರಕಾರಗಳಿಗಲ್ಲದೆ ಬೇರೆ ಯಾರಿಗೂ ಸಾಫ್ಟ್ ವೇರ್ ಗಳನ್ನು ಮಾರಾಟ ಮಾಡುವುದಿಲ್ಲ
ಇಸ್ರೇಲ್ ನ 'ಪೆಗಾಸಸ್ ಸ್ಪೈವೇರ್' ತಯಾರಕ ಸಂಸ್ಥೆ

ಹೊಸದಿಲ್ಲಿ, ನ.1: ಭಾರತದ ಪ್ರಮುಖ ಮಾನವಹಕ್ಕು ಹೋರಾಟಗಾರರು ಹಾಗೂ ಇತರರ ಮೇಲೆ ಬೇಹುಗಾರಿಕೆ ನಡೆಸಿದೆಯೆನ್ನಲಾದ 'ಪೆಗಾಸಸ್ ಸ್ಪೈವೇರ್'ನ ತಯಾರಕ ಸಂಸ್ಥೆ ಎನ್‍ಎಸ್‍ಒ ಗ್ರೂಪ್ 'ಯಾರೆಲ್ಲ ತನ್ನ ಗ್ರಾಹಕರು ಅಥವಾ ಯಾರೆಲ್ಲ ತನ್ನ ಗ್ರಾಹಕರಲ್ಲ' ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು thequint.comಗೆ ತಿಳಿಸಿದೆ. ಇದೇ ವೇಳೆ ತನ್ನ ಸಾಫ್ಟ್ ವೇರ್ ಉತ್ಪನ್ನಗಳನ್ನು ಸರಕಾರಗಳಿಗಲ್ಲದೆ ಬೇರೆ ಯಾರಿಗೂ ಮಾರಾಟ ಮಾಡುವುದಿಲ್ಲವೆಂದು ಅದು ಪುನರುಚ್ಚರಿಸಿದೆ.
ಭಾರತ ಸರಕಾರದ ಯಾವುದಾದರೂ ಏಜನ್ಸಿ ಜತೆ ಎನ್‍ಎಸ್‍ಒ ಗ್ರೂಪ್ ಒಪ್ಪಂದ ಮಾಡಿಕೊಂಡಿದೆಯೇ ಎಂಬಿತ್ಯಾದಿ ಹಲವಾರು ಪ್ರಶ್ನೆಗಳನ್ನು ಸಂಸ್ಥೆಗೆ thequint.com ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿರುವ ಸಂಸ್ಥೆ "ಪರವಾನಿಗೆ ಹೊಂದಿದ ಸರಕಾರಿ ಗುಪ್ತಚರ ಮತ್ತು ಕಾನೂನು ಜಾರಿ ಏಜನ್ಸಿಗಳಿಗೆ ತಂತ್ರಜ್ಞಾನ ಒದಗಿಸುವ ಏಕೈಕ ಉದ್ದೇಶವನ್ನು ಎನ್‍ಎಸ್‍ಒ ಹೊಂದಿದೆ'' ಎಂದು ಹೇಳಿದೆಯಲ್ಲದೆ ನಿಖರವಾಗಿ ಉತ್ತರಿಸಿಲ್ಲ.
"ಅಪರಾಧ ಮತ್ತು ಉಗ್ರವಾದ ತಡೆ ಹೊರತಾಗಿ ಬೇರೆ ಯಾವುದೇ ಉದ್ದೇಶಕ್ಕೆ ತನ್ನ ಉತ್ಪನ್ನಗಳ ಬಳಕೆಯನ್ನು ದುರ್ಬಳಕೆ ಎಂದು ಕಂಪೆನಿ ಪರಿಗಣಿಸುತ್ತದೆ ಹಾಗೂ ಭಾರತೀಯ ನಾಗರಿಕರ ಮೇಲೆ ಈ ಉತ್ಪನ್ನವನ್ನು ಬಳಸಲಾದ ರೀತಿ ನಿಷಿದ್ಧವಾಗಿದೆ'' ಎಂದು ಹೇಳಿಕೊಂಡಿದೆ.
``ಯಾವುದೇ ದುರ್ಬಳಕೆ ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳುತ್ತೇವೆ'' ಎಂದು ಕಂಪೆನಿ ಸ್ಪಷ್ಟವಾಗಿ ತಿಳಿಸಿದೆ. "ನಮ್ಮ ತಂತ್ರಜ್ಞಾನ ಮಾನವ ಹಕ್ಕು ಕಾರ್ಯಕರ್ತರು ಮತ್ತು ಪತ್ರಕರ್ತರ ವಿರುದ್ಧ ಪ್ರಯೋಗಿಸಲು ವಿನ್ಯಾಸಗೊಳಿಸಲಾಗಿಲ್ಲ ಯಾ ಪರವಾನಗಿ ನೀಡಲಾಗಿಲ್ಲ. ಆದರೆ ಅದು ಇತ್ತೀಚಿಗಿನ ವರ್ಷಗಳಲ್ಲಿ ಸಾವಿರಾರು ಜೀವಗಳನ್ನು ರಕ್ಷಿಸಲು ಸಹಾಯ ಮಾಡಿದೆ'' ಎಂದು ಕಂಪೆನಿ ಹೇಳಿಕೊಂಡಿದೆ.
"ನಮ್ಮ ಗ್ರಾಹಕರ ಸಾರ್ವಜನಿಕ ಸುರಕ್ಷತಾ ಕಾರ್ಯಕ್ರಮಗಳು ಹಾಗೂ ಹಲವಾರು ಕಾನೂನಾತ್ಮಕ ಹಾಗೂ ಒಪ್ಪಂದ ಕುರಿತಾದ ನಿರ್ಬಂಧಗಳಿಂದಾಗಿ ಯಾರೆಲ್ಲಾ ನಮ್ಮ ಗ್ರಾಹಕರು ಹಾಗೂ ಯಾರೆಲ್ಲಾ ನಮ್ಮ ಗ್ರಾಹಕರಲ್ಲ ಎಂಬುದನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಹಾಗೂ ನಮ್ಮ ತಂತ್ರಜ್ಞಾನದ ನಿರ್ದಿಷ್ಟ ಬಳಕೆಗಳ ಕುರಿತಂತೆ ಚರ್ಚಿಸಲೂ ಸಾಧ್ಯವಿಲ್ಲ'' ಎಂದು ಎನ್‍ಎಸ್‍ಒ ಗ್ರೂಪ್ ಹೇಳಿದೆ.
ವಾಟ್ಸ್ ಆ್ಯಪ್ ತನ್ನ ವಿರುದ್ಧ ದಾಖಲಿಸಿರುವ ಮೊಕದ್ದಮೆ ಕುರಿತಂತೆ ಪ್ರತಿಕ್ರಿಯಿಸಿದ ಕಂಪೆನಿ ತಾನು ಆರೋಪಗಳನ್ನು ನಿರಾಕರಿಸುವುದಾಗಿ ಹಾಗೂ ಈ ನಿಟ್ಟಿನಲ್ಲಿ ಹೋರಾಡುವುದಾಗಿ ತಿಳಿಸಿದೆ.







