ಕೇಂದ್ರದ ಮಧ್ಯಸ್ಥಿಕೆಯೊಂದಿಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಬೊಮ್ಮಾಯಿ
ಮಹಾರಾಷ್ಟ್ರ ಸಮುದ್ರದಲ್ಲಿ ರಾಜ್ಯದ ಮೀನುಗಾರರಿಗೆ ದೌರ್ಜನ್ಯ

ಉಡುಪಿ, ನ.1: ಮಹಾರಾಷ್ಟ್ರ ಸಮುದ್ರದಲ್ಲಿ ಕರ್ನಾಟಕದ ಮೀನುಗಾರಿಕಾ ದೋಣಿಗಳನ್ನು ಲೂಟಿ ಮಾಡಿ ಹಲ್ಲೆಗೈದು ಕಿರುಕುಳ ನೀಡುತ್ತಿರುವ ವಿಚಾರದ ಕುರಿತು ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿ ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜು ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾ ಉಸ್ತುವಾರಿ ಸಚಿವರ ಕಚೇರಿ ಯಲ್ಲಿ ಶುಕ್ರವಾರ ಈ ಕುರಿತ ಮಲ್ಪೆ ಮೀನುಗಾರರ ಸಂಘ ಸಲ್ಲಿಸಿದ ಮನವಿ ಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು. ಈ ಸಂಬಂಧ ರಾಜ್ಯ ಮುಖ್ಯ ಕಾರ್ಯದರ್ಶಿ, ಮಹಾರಾಷ್ಟ್ರದ ಮುಖ್ಯಕಾರ್ಯದರ್ಶಿ ಜೊತೆ ಮಾತುಕತೆ ನಡೆಸಿ ಪರಿಹಾರ ಕಂಡು ಕೊಳ್ಳಲಾಗುವುದು. ಅಲ್ಲದೆ ಕೇಂದ್ರ ಸರಕಾರ ಕೂಡ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಲಾಗುವುದು ಎಂದರು.
ಕರ್ನಾಟಕದ 12 ನಾಟಿಕಲ್ ಮೈಲ್ ಹೊರಗಡೆ ಎಲ್ಲ ರಾಜ್ಯದ ಮೀನು ಗಾರರು ಮೀನುಗಾರಿಕೆ ನಡೆಸುತ್ತಿದ್ದಾರೆ. ಆದರೆ ಮಹಾರಾಷ್ಟ್ರ ಸಮುದ್ರ ತೀರದಿಂದ 12 ನಾಟಿಕಲ್ ಮೈಲು ಹೊರಗೆ ಕರ್ನಾಟಕದ ಮೀನುಗಾರಿಕಾ ದೋಣಿಗಳ ಮೇಲೆ ಮಹಾರಾಷ್ಟ್ರದ ಕೆಲವು ಪ್ರದೇಶಗಳ ಮೀನು ಗಾರರು ಮಾರಣಾಂತಿಕ ಹಲ್ಲೆಗೈದು ಬೋಟಿನಲ್ಲಿದ್ದ ಮೀನು ಹಾಗೂ ಇತರ ಸಲಕರಣೆ ಗಳನ್ನು ಲೂಟಿ ಮಾಡುತಿದ್ದಾರೆ.
ಅಲ್ಲದೆ ಬೋಟಿನ ಇಂಜಿನ್ ಮತ್ತು ಡಿಸೇಲ್ ಟ್ಯಾಂಕ್‌ಗಳಿಗೆ ಹಾನಿಗೈದು ಲಕ್ಷಾಂತರ ರೂ. ನಷ್ಟ ಉಂಟು ಮಾಡುತ್ತಾರೆ. ಇದರಿಂದ ಮೀನುಗಾರಿಕೆ ಮಾಡುವ ಮೀನುಗಾರರು ಪ್ರಾಣಭಯದಿಂದ ಹೆದರಿ ಮೀನುಗಾರಿಕೆ ಮಾಡದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಕೃತ್ಯಗಳು ಪದೇ ಪದೇ ನಡೆಯುತ್ತಿದ್ದು, ಮೀನುಗಾರರಲ್ಲಿ ಆತಂಕ ಉಂಟು ಮಾಡುತ್ತಿದೆ ಎಂದು ಸಂಘ ಮನವಿಯಲ್ಲಿ ಆರೋಪಿಸಿದೆ.
ಸಾವಿರಾರು ಮಂದಿಯ ಉದ್ಯೋಗ, ಜೀವನೋಪಾಯಕ್ಕಾಗಿ ಮೀನು ಗಾರಿಕೆಯನ್ನು ಅಲವಂಬಿಸಿಕೊಂಡಿರುವ ಮೀನುಗಾರರಿಗೆ ಈ ರೀತಿಯ ಕೃತ್ಯಗಳಿಂದ ಮೀನುಗಾರಿಕೆ ಮಾಡಲಾಗದ ಪರಿಸ್ಥಿತಿ ಉದ್ಭವವಾಗಿದೆ. ಇದಕ್ಕೆ ಸಂಬಂಧಪಟ್ಟವರು ಕೂಡಲೇ ಸ್ಪಂದಿಸಿ ನ್ಯಾಯ ಒದಗಿಸಿ ಮೀನುಗಾರಿಕೆ ಯಾವುದೇ ಭಯ ಇಲ್ಲದೆ ನಿರಂತರವಾಗಿ ನಡೆಯುವಂತೆ ಮಾಡಬೇಕು ಎಂದು ಸಂಘ ಮನವಿಯಲ್ಲಿ ಒತ್ತಾಯಿಸಿದೆ.
ಈ ಸಂದರ್ಭದಲ್ಲಿ ಮೀನುಗಾರರ ಸಂಘದ ಅಧ್ಯಕ್ಷ ಕೃಷ್ಣ ಸುವರ್ಣ, ಉಪಾಧ್ಯಕ್ಷ ರಮೇಶ್ ಕೋಟ್ಯಾನ್, ಕಾರ್ಯದರ್ಶಿ ಸುಭಾಷ್, ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ ಉಪಸ್ಥಿತರಿದ್ದರು.