ಎಚ್‌ಡಿಕೆ-ಬಿಎಸ್‌ವೈ ಹಸ್ತಲಾಘವ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ

ಬೆಂಗಳೂರು, ನ. 1: ಬದ್ಧ ವೈರಿಗಳಾಗಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮುಖಾಮುಖಿಯಾಗಿದ್ದು, ಪರಸ್ಪರ ಹಸ್ತಲಾಘವ ಮಾಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಸೃಷ್ಟಿಸಿದೆ.
ಶುಕ್ರವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ವಸುಂಧರ ಮತ್ತು ರಾಜ ಭಾಗಮಾನೆ ಅವರ ಪುತ್ರನ ಮದುವೆ ಆರತಕ್ಷತೆ ಸಮಾರಂಭದಲ್ಲಿ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಕುಮಾರಸ್ವಾಮಿ, ಎಸ್ಸೆಂ ಕೃಷ್ಣ, ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.
ಈ ಸಂದರ್ಭದಲ್ಲಿ ವಧು-ವರರಿಗೆ ಶುಭ ಕೋರಿದ ಕುಮಾರಸ್ವಾಮಿ ನೇರವಾಗಿ ಸಿಎಂ ಬಿಎಸ್‌ವೈ ಹಾಗೂ ಮಾಜಿ ಸಿಎಂ ಎಸ್ಸೆಂ ಕೃಷ್ಣ ಅವರ ಕೂತಿದ್ದ ಸ್ಥಳಕ್ಕೆ ತೆರಳಿ ಹಸ್ತಲಾಘವ ನೀಡಿದರು. ಈ ವೇಳೆ ಕೆಲ ಕಾಲ ಇಬ್ಬರು ನಾಯಕರ ಕುಶಲೋಪರಿ ವಿಚಾರಿಸಿದ್ದಾರೆಂದು ಗೊತ್ತಾಗಿದೆ.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಉರುಳಿ ಬಿದ್ದ ಬಳಿಕ ಸಿಎಂ ಬಿಎಸ್‌ವೈ ವಿರುದ್ಧ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ಎಚ್‌ಡಿಕೆ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧವೂ ಬಹಿರಂಗವಾಗಿ ಟೀಕಿಸಿದ್ದರು. ಈ ಮಧ್ಯೆ ಎಚ್‌ಡಿಕೆ, ಬಿಜೆಪಿ ಸರಕಾರ ಉರುಳುವ ಸ್ಥಿತಿ ಎದುರಾದರೆ ಬೆಂಬಲಿಸುವ ಬಗ್ಗೆ ಚಿಂತಿಸಲಾಗುವುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.







