ಭಾರತದ ರಫ್ತು ಸಬ್ಸಿಡಿಗಳು ಅಕ್ರಮ: ಡಬ್ಲ್ಯುಟಿಒ ಸಮಿತಿ

ಹೊಸದಿಲ್ಲಿ,ನ.1: ಅಮೆರಿಕವು ಸಲ್ಲಿಸಿದ್ದ ದೂರನ್ನು ಪುರಸ್ಕರಿಸಿರುವ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲ್ಯುಟಿಒ)ಯ ವಿವಾದ ಸಮಿತಿಯು ಭಾರತದ ರಫ್ತು ಸಬ್ಸಿಡಿಗಳು ಅಕ್ರಮವಾಗಿವೆ ಎಂದು ಗುರುವಾರ ತೀರ್ಪು ನೀಡಿದೆ. 90ರಿಂದ 180 ದಿನಗಳ ಅವಧಿಗಳಲ್ಲಿ ಈ ಸಬ್ಸಿಡಿಗಳನ್ನು ರದ್ದುಗೊಳಿಸುವಂತೆ ಅದು ಸರಕಾರಕ್ಕೆ ನಿರ್ದೇಶ ನೀಡಿದೆ.
ಸೀಮಾಸುಂಕ ಮತ್ತು ತೆರಿಗೆ ವಿನಾಯಿತಿಗಳ ರೂಪದಲ್ಲಿ ನೀಡಲಾಗಿರುವ ರಫ್ತು ಸಬ್ಸಿಡಿಯನ್ನು ಪ್ರಶ್ನಿಸಿದ್ದ ಅಮೆರಿಕದ ವಾದವನ್ನು ಸಮಿತಿಯು ಒಪ್ಪಿಕೊಂಡಿದೆಯಾದರೂ ಅದರ ಇತರ ಕೆಲವು ವಾದಗಳನ್ನು ತಿರಸ್ಕರಿಸಿದೆ.
ಉಕ್ಕು, ಔಷಧಿಗಳು, ರಾಸಾಯನಿಕಗಳು, ಮಾಹಿತಿ ತಂತ್ರಜ್ಞಾನ ಮತ್ತು ಜವಳಿ ಉತ್ಪನ್ನಗಳ ಉತ್ಪಾದಕರು ಸೇರಿದಂತೆ ಭಾರತೀಯ ರಫ್ತುದಾರರಿಗೆ ಏಳು ಶತಕೋಟಿ ಡಾ.(49,663 ಕೋ.ರೂ.)ಗೂ ಹೆಚ್ಚಿನ ನಿಷೇಧಿತ ವಾರ್ಷಿಕ ಸಬ್ಸಿಡಿಗಳನ್ನು ಭಾರತವು ಒದಗಿಸುತ್ತಿದೆ ಎನ್ನುವುದನ್ನು ಡಬ್ಲ್ಯುಟಿಒ ಗಮನಕ್ಕೆ ತೆಗೆದುಕೊಂಡಿದೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕಚೇರಿಯು ಹೇಳಿಕೆಯೊಂದರಲ್ಲಿ ತಿಳಿಸಿದೆ.
ಸಬ್ಸಿಡಿಗಳು ಮತ್ತು ದೇಶಿಯ ಉತ್ಪಾದಕರನ್ನು ರಕ್ಷಿಸಲು ಆಮದುಗಳ ಮೇಲೆ ಸುಂಕವನ್ನು ಹೇರುವ ಕ್ರಮಗಳ ಕುರಿತಂತೆ ಡಬ್ಲುಟಿಒ ಒಪ್ಪಂದದಡಿ ರಫ್ತು ಸುಂಕ ನಿಷೇಧದಿಂದ ತಾನು ವಿನಾಯಿತಿ ಹೊಂದಿದ್ದೇನೆ ಎಂಬ ಭಾರತದ ವಾದವನ್ನು ತಿರಸ್ಕರಿಸಿರುವುದಾಗಿ ವಿವಾದ ಸಮಿತಿಯು ತನ್ನ ತೀರ್ಪಿನಲ್ಲಿ ತಿಳಿಸಿದೆ.
ಕಳೆದ ವರ್ಷ ಡಬ್ಲ್ಯುಟಿಒಗೆ ಸಲ್ಲಿಸಿದ್ದ ತನ್ನ ದೂರಿನಲ್ಲಿ ಅಮೆರಿಕವು,ಭಾರತದ ರಫ್ತು ಕಾರ್ಯಕ್ರಮಗಳು ತನ್ನ ಕಾರ್ಮಿಕರಿಗೆ ಹಾನಿಯನ್ನುಂಟು ಮಾಡುತ್ತಿದೆ ಎಂದು ಆರೋಪಿಸಿತ್ತು. ರಫ್ತು ಸಬ್ಸಿಡಿಗಳನ್ನು ಹಂತಹಂತವಾಗಿ ರದ್ದುಗೊಳಿಸಬೇಕೆಂಬ ಒಪ್ಪಂದದಲ್ಲಿಯ ಅಂಶವನ್ನು ಅದು ಉಲ್ಲೇಖಿಸಿತ್ತು.
ಒಪ್ಪಂದದಂತೆ 1990ರ ವಿನಿಮಯ ದರಗಳಂತೆ ಸತತ ಮೂರು ವರ್ಷಗಳಿಗೆ 1,000 ಡಾ.ರಾಷ್ಟ್ರೀಯ ತಲಾದಾಯವನ್ನು ದಾಟುವ ಕನಿಷ್ಠ ಅಭಿವೃದ್ಧಿಗೊಂಡ ಮತ್ತು ಅಭಿವೃದ್ಧಿಶೀಲ ದೇಶಗಳಿಗೆ ಎಲ್ಲ ರಫ್ತು ಸಬ್ಸಿಡಿಗಳನ್ನು ನಿಲ್ಲಿಸಲು ಎಂಟು ವರ್ಷಗಳ ಕಾಲಾವಕಾಶವಿದೆ.
ಭಾರತಕ್ಕೆ ಆರಂಭದಲ್ಲಿ ನೀಡಿದ್ದ ವಿನಾಯಿತಿಯು ಅಂತ್ಯಗೊಂಡಿದೆ ಮತ್ತು ಇನ್ನಷ್ಟು ಸಮಯಾವಕಾಶವನ್ನು ಪಡೆಯಲು ಅದು ಅರ್ಹವಾಗಿಲ್ಲ ಎಂದು ವಿವಾದ ಸಮಿತಿಯು ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.







