ಅಕ್ಟೋಬರ್‌ನಲ್ಲಿ ನಿರುದ್ಯೋಗ ಪ್ರಮಾಣ 8.5%ಕ್ಕೆ ಏರಿಕೆ: 3 ವರ್ಷಗಳಲ್ಲೇ ಅತ್ಯಧಿಕ !

ಹೊಸದಿಲ್ಲಿ, ನ.1: ಭಾರತದಲ್ಲಿ ಅಕ್ಟೋಬರ್ ತಿಂಗಳಿನಲ್ಲಿ ನಿರುದ್ಯೋಗ ಪ್ರಮಾಣ 8.5%ಕ್ಕೆ ಹೆಚ್ಚಿದ್ದು, ಕಳೆದ 3 ವರ್ಷದಲ್ಲೇ ಇದು ಅತ್ಯಧಿಕವಾಗಿದೆ ಎಂದು ಸಿಎಂಐಇ ಬಿಡುಗಡೆಗೊಳಿಸಿರುವ ವರದಿ ತಿಳಿಸಿದೆ.
ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲು ಸರಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡರೂ, ದೇಶದ ಆರ್ಥಿಕ ಅಭಿವೃದ್ಧಿ ಕುಂಠಿತವಾಗಿರುವ ಪರಿಣಾಮದಿಂದ ಉದ್ಯೋಗದ ಪ್ರಮಾಣ ಕಡಿಮೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿ(ಸಿಎಂಐಇ) ಬಿಡುಗಡೆಗೊಳಿಸಿರುವ ಹೊಸ ವರದಿಯಲ್ಲಿ ತಿಳಿಸಲಾಗಿದೆ. ಜೊತೆಗೆ, ಸೆಪ್ಟೆಂಬರ್ ತಿಂಗಳಲ್ಲಿ ಭಾರತದ ಮೂಲಸೌಕರ್ಯ ಉತ್ಪಾದನೆ 5.2% ಕ್ಕೆ ಸಂಕುಚಿತಗೊಂಡಿದ್ದು, ಇದು ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಿದೆ.
ದೇಶದ 8 ಪ್ರಮುಖ ಕೈಗಾರಿಕೆಗಳ ಸೆಪ್ಟೆಂಬರ್ ತಿಂಗಳ ಉತ್ಪಾದನೆ ಕಡಿಮೆಯಾಗಿದೆ. 2011-12 ಮತ್ತು 2017-18ರ ಮಧ್ಯೆ ಭಾರತದಲ್ಲಿ ಒಟ್ಟು ಉದ್ಯೋಗ ಪ್ರಮಾಣದಲ್ಲಿ ಗಮನಾರ್ಹ ಇಳಿಕೆಯಾಗಿದೆ . ಭಾರತದಲ್ಲಿ ನಿರುದ್ಯೋಗದ ಅಲೆ, ಗುತ್ತಿಗೆ ನೌಕರರೇ ಹೆಚ್ಚಿರುವ ಅಸಂಘಟಿತ ಕ್ಷೇತ್ರಕ್ಕೆ ಹೊಡೆತ ನೀಡಿದೆ. ಬೇಡಿಕೆ ಕುಸಿದಿರುವುದರಿಂದ ದಿನಗೂಲಿ ನೌಕರರೂ ಸಮಸ್ಯೆಗೆ ಸಿಲುಕಿದ್ದಾರೆ. ಬೇಡಿಕೆ ವಿಪರೀತ ಕುಸಿದಿರುವ ಹಿನ್ನೆಲೆಯಲ್ಲಿ ಕಳೆದ ಕೆಲವು ತಿಂಗಳಿಂದ ಹಲವು ಕೈಗಾರಿಕೆಗಳು ಉತ್ಪಾದನೆಯನ್ನು ಕಡಿವೆುಗೊಳಿಸಿವೆ. ಇದು ನಿರುದ್ಯೋಗ ಪ್ರಮಾಣ ಹೆಚ್ಚಲು ಪ್ರಮುಖ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಮೇಲೆ ತಿಳಿಸಿರುವ ಅವಧಿಯಲ್ಲಿ 9 ಮಿಲಿಯನ್‌ನಷ್ಟು ಉದ್ಯೋಗ ಕಡಿಮೆಯಾಗಿದ್ದು ಭಾರತದ ಇತಿಹಾಸದಲ್ಲೇ ಪ್ರಥಮ ಬಾರಿಗೆ ಈ ರೀತಿಯ ಘಟನೆ ಸಂಭವಿಸಿದೆ ಎಂದು ಸಂತೋಷ್ ಮೆಹ್ರೋತ್ರಾ ಮತ್ತು ಜಜಾಟಿ ಕೆ ಪರೀದಾ ಅವರು ಸಿದ್ಧಪಡಿಸಿರುವ ಸಂಶೋಧನಾ ವರದಿ ತಿಳಿಸಿದೆ.







