ರಾಷ್ಟ್ರೀಯ ಅಧ್ಯಕ್ಷರೇ 17 ಶಾಸಕರನ್ನು ತಿಂಗಳುಗಳ ಕಾಲ ಮುಂಬೈನಲ್ಲಿಟ್ಟಿದ್ದರು
ಯಡಿಯೂರಪ್ಪರದ್ದು ಎನ್ನಲಾದ ವಿಡಿಯೋ ವೈರಲ್

ಬೆಂಗಳೂರು, ನ. 1: "ನೀವು ಮಾತನಾಡಿದ ದಾಟಿ ಈ ಸರಕಾರವನ್ನು ಉಳಿಸುವ ನಿಟ್ಟಿನಲ್ಲಿ ಇದೆ ಎಂದು ನನಗನಿಸುತ್ತಿಲ್ಲ. ಸ್ವತಃ ರಾಷ್ಟ್ರೀಯ ಅಧ್ಯಕ್ಷರೇ (ಅಮಿತ್ ಶಾ) ಮುಂದೆ ನಿಂತು 17 ಶಾಸಕರನ್ನು ತಿಂಗಳುಗಳ ಕಾಲ ಮುಂಬೈನಲ್ಲಿಟ್ಟದ್ದು ನಿಮಗೆ ಗೊತ್ತಿರಬಹುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಪಕ್ಷದ ಮುಖಂಡರ ಎದುರು ಅನರ್ಹ ಶಾಸಕರ ಬಗ್ಗೆ ಅನುಕಂಪ ವ್ಯಕ್ತಪಡಿಸಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ.
ಹುಬ್ಬಳ್ಳಿಯಲ್ಲಿ ಇತ್ತೀಚೆಗೆ ನಡೆದ ಪಕ್ಷದ ಚುನಾವಣಾ ಸಮಿತಿ ಸಭೆಯಲ್ಲಿ ಅನರ್ಹ ಶಾಸಕರಿಗೆ ಉಪ ಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರಕ್ಕೆ ಸಂಬಂಧಿಸಿದಂತೆ ಯಡಿಯೂರಪ್ಪ ಮಾತನಾಡಿದ್ದಾರೆನ್ನಲಾಗಿದ್ದು, 'ಪಕ್ಷದ ಮುಖಂಡರ ಹೇಳಿಕೆಗಳಿಂದ ನನಗೆ ಅತೀವ ನೋವಾಗಿದೆ. ನಾನೇ ಸಿಎಂ ಕುರ್ಚಿಯಲ್ಲಿ ಕೂತು ಅಪರಾಧ ಮಾಡಿದ್ದೇನೆ ಎಂಬ ಅನುಮಾನ ನನ್ನನ್ನು ಕಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಅನರ್ಹ ಶಾಸಕರು ನಮ್ಮನ್ನು ನಂಬಿ ತಮ್ಮ ಶಾಸಕ ಸ್ಥಾನ ತ್ಯಜಿಸಿ ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ವಿಪಕ್ಷ ಸ್ಥಾನದಲ್ಲಿದ್ದ ನಾವಿಂದು ಅಧಿಕಾರಕ್ಕೆ ಬಂದಿರುವುದು ಅನರ್ಹ ಶಾಸಕರಿಂದ. ಅನರ್ಹರು ಕೈಜೋಡಿಸದಿದ್ದರೆ ನಾವು ಇನ್ನೂ ಮೂರುವರೆ ವರ್ಷ ವಿರೋಧ ಪಕ್ಷದಲ್ಲಿ ಕುಳಿತಿರಬೇಕಿತ್ತು. ಆದರೆ, ಅವರ ಪರವಾಗಿ ಯಾರೊಬ್ಬರೂ ಮಾತನಾಡುತ್ತಿಲ್ಲ’ ಎಂದು ಬಿಎಸ್‌ವೈ ತಮ್ಮ ಅಳಲು ತೋಡಿಕೊಂಡಿದ್ದಾರೆ ಎನ್ನಲಾಗಿದೆ.
‘17 ಮಂದಿ ಶಾಸಕರು ರಾಜೀನಾಮೆ ನೀಡಿದ್ದು, ಕೋರ್ಟ್ ಮೆಟ್ಟಿಲೇರಿದ್ದಾರೆ. ಆದರೆ, ಅವರಿಗೆ ಅಲ್ಲಿ ನ್ಯಾಯ ಸಿಗುವ ವಿಶ್ವಾಸವಿದೆ. ಆದರೆ, ಅವರ ಪರವಾಗಿ ಮಾತನಾಡಬೇಕಾದ ನಾವಿಂದು ಅವರ ವಿರುದ್ಧ ಮಾತನಾಡಿದ ದಾಟಿ ಸರಿಯಲ್ಲ. ಉಪಚುನಾವಣೆಯಲ್ಲಿ ಟಿಕೆಟ್ ನೀಡುವ ವಿಚಾರವಾಗಿ ಅನರ್ಹರಿಗೆ ಹೆಗಲು ಕೊಡುವ ಬದಲು ಅವರಿಗೆ ಘಾಸಿಯಾಗುವಂತಹ ಮಾತುಗಳನ್ನು ನಾವೇ ಆಡಿದರೆ ಅವರ ಪರಿಸ್ಥಿತಿ ಏನು? ನಮ್ಮನ್ನು ನಂಬಿ ಅವರು ಮೂರ್ಖರಾದಂತೆ ಅಲ್ಲವೇ? ನಾನು ಈ ಸಭೆಗೆ ಬರಬಾರದಿತ್ತು’ ಎಂದು ಯಡಿಯೂರಪ್ಪ, ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದರು ಎನ್ನಲಾಗಿದೆ.
‘ಬಿಜೆಪಿ ಸರಕಾರ ರಚನೆಗೆ ಮೂಲ ಕಾರಣಕರ್ತರಾದ ಅನರ್ಹ ಶಾಸಕರ ಬಗ್ಗೆ ಹಗುರವಾಗಿ ಮಾತನಾಡುವ ಮೂಲಕ ನಾವು ಏನು ಮಾಡಹೊರಟಿದ್ದೇವೆ ಎಂಬುದೇ ತಿಳಿಯುತ್ತಿಲ್ಲ. ನಿಮ್ಮಿಂದ ಇಂತಹ ಮಾತು-ವರ್ತನೆಯನ್ನು ನಾನು ನಿರೀಕ್ಷಿಸಿರಲಿಲ್ಲ’ ಎಂದು ಯಡಿಯೂರಪ್ಪ, ಮುಖಂಡರನ್ನು ತರಾಟೆಗೆ ತೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ವಿಡಿಯೋ ಯಡಿಯೂರಪ್ಪ ಅವರದ್ದೇ ಎಂಬುವುದು ಇನ್ನೂ ಖಚಿತವಾಗಿಲ್ಲ.







