‘ಅಬ್ಬರೊಟ್ಟಿಗೆ ಒರು ನಾಲ್’ : ಟ್ಯಾಲೆಂಟ್‌ನಲ್ಲಿ ವಿನೂತನ ಕಾರ್ಯಕ್ರಮ

ಮಂಗಳೂರು, ನ.1: ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ ಮತ್ತು ವಿವಿಧ ರಂಗಗಳಲ್ಲಿ ಸಾಧನೆ ಮಾಡಿದವರನ್ನು ಗುರುತಿಸಿ ಅಭಿನಂದಿಸುವ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯುತ್ತಿರುವುದು ಸಾಮಾನ್ಯ, ಆದರೆ ಕುಟುಂಬದ ಸದಸ್ಯರೆಲ್ಲರೂ ಸೇರಿಕೊಂಡು ತಮ್ಮ ತಂದೆಯ ನಿಷ್ಠೆ, ಪ್ರಾಮಾಣಿಕತೆ, ಪರಿಶ್ರಮ, ತ್ಯಾಗ, ಸಹಿಷ್ಣುತೆ, ಸಮಯ ಪ್ರಜ್ಙೆ, ಪರೋಪಕಾರ, ಮಾನವೀಯತೆ ಇತ್ಯಾದಿ ಮೌಲ್ಯಗಳಿಗೆ ಪ್ರತೀಕವಾಗಿ ತಂದೆಯನ್ನು ಅಭಿನಂದಿಸುವ ವಿಶಿಷ್ಠ ಕಾರ್ಯಕ್ರಮವು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ಜಿಲ್ಲೆಯ ನಾನಾ ಕಡೆಗಳಿಂದ ಬಂದ ಸುಮಾರು ಹತ್ತು ಕುಟುಂಬಸ್ಥರು ತಂದೆಯರನ್ನು ಅಭಿನಂದಿಸುವ ‘ಅಬ್ಬರೊಟ್ಟಿಗೆ ಒರು ನಾಲ್’ ಎಂಬ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ‘ಪಿರ್ಸತ್ತೊ ಅಬ್ಬ ಪ್ರಶಸ್ತಿ 2019’ ನೀಡಿ ಗೌರವಿಸಲಾಯಿತು.
ತಮ್ಮ ತಂದೆಯ ಕುರಿತು ಮಾತನಾಡುವ ಸಂದರ್ಭ ಅನೇಕರು ಭಾವುಕರಾದರು. ಮಕ್ಕಳು ತಮ್ಮ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡುವಾಗ ತಂದೆಯಂದಿರ ಮುಖದಲ್ಲಿ ಸಾರ್ಥಕತೆಯ ಭಾವ ಎದ್ದು ಕಾಣುತ್ತಿತ್ತು. ಭಾವುಕರಾದ ತಂದೆಯರ ಕಣ್ಣಲ್ಲಿ ಆನಂದಬಾಷ್ಪ ಹರಿಯುತ್ತಿರುವ ದೃಶ್ಯ ಕಂಡುಬಂತು.
ನನ್ನ ವೈಯಕ್ತಿಕ ಸಾಧನೆಯ ಹಿಂದೆ ತಂದೆಯ ಪ್ರೇರಣೆ ಅಪಾರವಾದದ್ದು. ತಂದೆಯ ತ್ಯಾಗ, ಕಠಿಣ ಪರಿಶ್ರಮ ಹಾಗೂ ಸಮಯ ಪ್ರಜ್ಞೆಯ ಕುರಿತು ಮಾತನಾಡಿದ ಸಾಮಾಜಿಕ ಹೋರಾಟಗಾರ ರಿಯಾಝ್ ಫರಂಗಿಪೇಟೆಯದ್ದಾದರೆ, ನನ್ನ ತಂದೆಯ ಬಗ್ಗೆ ಹೇಳುವುದಾದರೆ ಬೆಟ್ಟದಷ್ಟಿದೆ ಎಂದು ಕೆ.ಎಂ ಕೊಡುಂಗಾಯಿ ಹೇಳಿದರು.
ವಿದ್ಯಾಭ್ಯಾಸಕ್ಕೆ ಪ್ರಯತ್ನಿಸಿದ ತಂದೆಯ ಕುರಿತು ಈ ಅಲ್ಪಸಮಯದಲ್ಲಿ ಏನನ್ನು ಹೇಳಲು ಸಾಧ್ಯ ? ಎಂಬ ಪ್ರಶ್ನೆ ಸಮಾಜ ಸೇವಕಿ ಶಬನಾ ಅವರದ್ದಾಗಿತ್ತು. ಯೆನೆಪೊಯ ಮೆಡಿಕಲ್ ಕಾಲೇಜಿನ ಉಪನ್ಯಾಸಕ ಅನ್ವರ್ ಅಮೆಮ್ಮಾರ್ ನನ್ನ ಉನ್ನತ ಶಿಕ್ಷಣ ಪೂರ್ಣಗೊಳಿಸಲು ತಂದೆಯ ಪ್ರೋತ್ಸಾಹ ಕಾರಣ ಎಂದಾಗ ಕುಟುಂಬಸ್ಥರ ಸಹಿತ ಸಭಿಕರ ಕಣ್ಣಾಲಿಗಳು ತೇಲಿಬಂತು. ಮನುಷ್ಯರಿಗೆ ತಾಯಿಯ ಸ್ಥಾನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ತಂದೆಯ ಪಾತ್ರ ಎಂಬುವುದನ್ನು ಮೂಡುಬಿದಿರೆಯ ಮುಹಮ್ಮದ್ ಮುಸ್ತಫಾ ಹೇಳಿದರು.
ಹೀಗೆ ಒಬ್ಬರ ನಂತರ ಒಬ್ಬರು ತಮ್ಮ ತಂದೆಯನ್ನು ಕೊಂಡಾಡುವ ಭಾವಪೂರ್ಣ ದೃಶ್ಯಕ್ಕೆ ಟ್ಯಾಲೆಂಟ್ ಸಭಾಂಗಣ ಸಾಕ್ಷಿಯಾಯಿತು. ಕಾರ್ಯಕ್ರಮದಲ್ಲಿ ಟಿಆರ್‌ಎಫ್ ಅಧ್ಯಕ್ಷ ರಿಯಾಝ್ ಕಣ್ಣೂರು ಅಧ್ಯಕ್ಷೀಯ ಭಾಷಣ ಮಾಡಿದರು. ಟ್ಯಾಲೆಂಟ್ ಸಂಸ್ಥಾಪಕ ಅಬ್ದುಲ್ ರವೂಫ್ ಪುತ್ತಿಗೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.
ವೇದಿಕೆಯಲ್ಲಿ ಟ್ಯಾಲೆಂಟ್ ಗೌರವ ಸಲಹೆಗಾರ ಸುಲೈಮಾನ್ ಶೇಕ್ ಬೆಳುವಾಯಿ, ನಂಡೆ ಪೆಂಙಳ್ ಅಧ್ಯಕ್ಷ ನೌಶಾದ್ ಹಾಜಿ ಸೂರಲ್ಪಾಡಿ, ಕಾರ್ಯದರ್ಶಿ ಭಾರತ್ ಮುಸ್ತಫಾ ಉಪಸ್ಥಿತರಿದ್ದರು.
ಟ್ಯಾಲೆಂಟ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಡಿ. ಅಬ್ದುಲ್ ಹಮೀದ್ ಕಣ್ಣೂರು ಕಿರಾಅತ್ ಪಠಿಸಿದರು. ಜೊತೆ ಕಾರ್ಯದರ್ಶಿ ಜಸೀಮ್ ಸಜಿಪ ಸ್ವಾಗತಿಸಿದರು. ಕಾರ್ಯಕ್ರಮದ ಸಂಯೋಜಕ ಮಹಮ್ಮದ್ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.
ಅಬ್ದುಲ್ ಸಲಾಂ ಪೆರ್ನೆ, ನಕಾಶ್ ಬಾಂಬಿಲ, ಮಜೀದ್ ತುಂಬೆ, ಬಡಿಲ ಹುಸೈನ್, ಹಕೀಂ ಪಕಲಡ್ಕ ಹಾಗೂ ಆಸರೆ ವುಮೆನ್ಸ್ ಫೌಂಡೇಶನ್‌ನ ಸದಸ್ಯರು ಸಹಕರಿಸಿದರು.




























