ಪಿಎಂಸಿ ಬ್ಯಾಂಕ್ ಪ್ರಕರಣ: ಕೇಂದ್ರ ಸರಕಾರಕ್ಕೆ ಹೈಕೋರ್ಟ್ ನೋಟಿಸ್

ಹೊಸದಿಲ್ಲಿ, ನ.1: ಪಂಜಾಬ್ ಮತ್ತು ಮಹಾರಾಷ್ಟ್ರ ಕೋ ಆಪರೇಟಿವ್ ಬ್ಯಾಂಕ್(ಪಿಎಂಸಿ)ಯಿಂದ ಗ್ರಾಹಕರು ಹಣ ಹಿಂಪಡೆಯಲು ವಿಧಿಸಿರುವ ನಿರ್ಬಂಧವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರತಿಕ್ರಿಯಿಸುವಂತೆ ತಿಳಿಸಿ ದಿಲ್ಲಿ ಹೈಕೋರ್ಟ್ ಶುಕ್ರವಾರ ಕೇಂದ್ರ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ಹಣ ಹಿಂಪಡೆಯಲು ವಿಧಿಸಿರುವ ನಿರ್ಬಂಧ ಪ್ರಶ್ನಿಸಿ ಹಾಗೂ ಗ್ರಾಹಕರು ಬ್ಯಾಂಕ್‌ನಲ್ಲಿ ಜಮೆ ಮಾಡಿರುವ ಹಣಕ್ಕೆ ಶೇ.100ರಷ್ಟು ವಿಮೆ ಸುರಕ್ಷೆ ಖಾತರಿಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿಯ ಬಗ್ಗೆ ನಿಲುವು ತಿಳಿಸುವಂತೆ ಸೂಚಿಸಿ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶ ಡಿಎನ್ ಪಟೇಲ್ ಹಾಗೂ ನ್ಯಾಯಾಧೀಶ ಸಿ ಹರಿಶಂಕರ್ ಅವರಿದ್ದ ನ್ಯಾಯಪೀಠ ವಿತ್ತ ಸಚಿವಾಲಯ, ದಿಲ್ಲಿ ಸರಕಾರ, ಆರ್‌ಬಿಐ ಮತ್ತು ಪಿಎಂಸಿ ಬ್ಯಾಂಕ್‌ಗೆ ನೋಟಿಸ್ ಜಾರಿಗೊಳಿಸಿದೆ.
ಪಿಎಂಸಿ ಬ್ಯಾಂಕ್‌ನಲ್ಲಿ 4,355 ಕೋಟಿ ರೂ. ಮೊತ್ತದ ಹಗರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಪಂಜಾಬ್ ಮತ್ತು ಮಹಾರಾಷ್ಟ್ರ ಕೋಆಪರೇಟಿವ್ ಬ್ಯಾಂಕ್‌ನ ಕಾರ್ಯನಿರ್ವಹಣೆಯ ಮೇಲೆ ಆರ್‌ಬಿಐ ನಿರ್ಬಂಧ ವಿಧಿಸಿತ್ತು.







