ಶಿವಮೊಗ್ಗ: ವಿಕಲಚೇತನ ವ್ಯಕ್ತಿಗೆ ಗಾಂಧಿ ಪಾರ್ಕ್ ಪ್ರವೇಶ ನಿರಾಕರಣೆ- ಆರೋಪ

ಶಿವಮೊಗ್ಗ, ನ.1: ಇಲ್ಲಿನ ಮಹಾತ್ಮ ಗಾಂಧಿ ಉದ್ಯಾನದೊಳಗೆ, ವಿಕಲಚೇತನ ವ್ಯಕ್ತಿಗೆ ಪ್ರವೇಶ ನಿರಾಕರಿಸಿದ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದೆ. ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿಯೂ ವೈರಲ್ ಆಗಿದೆ.
ನಗರದ ಡಿಸಿಸಿ ಬ್ಯಾಂಕ್ ಉದ್ಯೋಗಿ ಯೋಗೇಶ್, ಪಾರ್ಕ್‍ನೊಳಗೆ ಪ್ರವೇಶ ನಿರಾಕರಿಸ್ಪಟ್ಟ ವಿಕಲಚೇತನ ವ್ಯಕ್ತಿ. ಇವರ ಪುತ್ರಿಯು ಗಾಂಧಿ ಪಾರ್ಕ್‍ಗೆ ಕರೆದೊಯ್ಯುವಂತೆ ಕೋರಿಕೊಂಡ ಹಿನ್ನೆಲೆಯಲ್ಲಿ, ತಮ್ಮ ತ್ರಿಚಕ್ರ ವಾಹನದಲ್ಲಿ ಪುತ್ರಿಯೊಂದಿಗೆ ಪಾರ್ಕ್‍ಗೆ ಆಗಮಿಸಿದ್ದಾರೆ. ಪ್ರವೇಶ ದ್ವಾರದ ಕೌಂಟರ್ ನಲ್ಲಿ ಹಣ ಕೊಟ್ಟು ಟಿಕೆಟ್ ಪಡೆದಿದ್ದಾರೆ. ಅವರಿಗೆ ನಡೆಯಲು ಸಾಧ್ಯವಾಗದ ಕಾರಣದಿಂದ, ತ್ರಿಚಕ್ರ ವಾಹನದೊಂದಿಗೆ ಒಳ ಹೋಗಲು ಮುಂದಾಗಿದ್ದಾರೆ. ಆದರೆ ಅಲ್ಲಿದ್ದ ಸಿಬ್ಬಂದಿಗಳು, 'ನಿಮ್ಮ ತ್ರಿಚಕ್ರ ವಾಹನಕ್ಕೆ ಪಾರ್ಕ್ ಒಳಗೆ ಪ್ರವೇಶ ಕೊಡಲಾಗುವುದಿಲ್ಲ' ಎಂದು ಹೇಳಿದ್ದಾರೆ ಎನ್ನಲಾಗಿದೆ.
'ತಮಗೆ ನಡೆಯಲು ಆಗುವುದಿಲ್ಲ. ತ್ರಿಚಕ್ರ ವಾಹನ ಕೊಂಡೊಯ್ಯಲು ಅವಕಾಶ ನೀಡಿ' ಎಂದು ಸಿಬ್ಬಂದಿಗಳಿಗೆ ತಿಳಿಸಿದ್ದಾರೆ. 'ಈ ರೀತಿಯ ವಾಹನಗಳ ಪ್ರವೇಶಕ್ಕೆ ಅವಕಾಶ ನೀಡಬೇಡಿ. ಇದರಿಂದ ಪಾರ್ಕ್‍ಗೆ ಹಾನಿಯಾಗಲಿದೆ ಎಂದು ಮೇಲಿನವರು ಸೂಚಿಸಿದ್ದಾರೆ. ಅದರಂತೆ ಈ ಹಿಂದೆಯೂ ನಿಮ್ಮ ರೀತಿಯ ವಾಹನಗಳಲ್ಲಿ ಬಂದವರಿಗೆ ಪ್ರವೇಶ ನೀಡಿಲ್ಲ' ಎಂದು ಸಿಬ್ಬಂದಿಗಳು ತಿಳಿಸಿದರು ಎಂದು ಯೋಗೇಶ್ ಆರೋಪಿಸಿದ್ದಾರೆ.
'ಮೈಸೂರಿನ ಕೆಆರ್‍ಎಸ್ ಸೇರಿದಂತೆ ಬಹಳಷ್ಟು ಪ್ರವಾಸಿ ತಾಣಗಳಿಗೆಲ್ಲ ಹೋಗಿ ಬಂದಿದ್ದೆನೆ. ಎಲ್ಲಿಯೂ ಈ ರೀತಿಯ ಕಹಿ ಅನುಭವಗಳಾಗಿಲ್ಲ. ಆದರೆ ನನ್ನದೇ ಶಿವಮೊಗ್ಗದಲ್ಲಿ, ಪ್ರವೇಶ ನಿರಾಕರಿಸಿದ್ದು ಬೇಸರ ಉಂಟು ಮಾಡಿತು' ಎಂದು ನೋವು ವ್ಯಕ್ತಪಡಿಸಿದ್ದಾರೆ.
ವಿಕಲಚೇತನರಿಗೆ ನಿರಾಕರಣೆಯೇಕೆ?: ಪತ್ರಕರ್ತ ಶಿ.ಜು.ಪಾಶ
'ವಿಕಲಚೇತನರು ಮನುಷ್ಯರಲ್ಲವೇ? ಅವರಿಗೆ ಪಾರ್ಕಿನ ಒಳಗೆ ಸಾಮಾನ್ಯ ಮನುಷ್ಯರಂತೆ ಹೋಗಿ ಬರುವ ಸ್ವಾತಂತ್ರ್ಯ ಏಕಿಲ್ಲ? ಅವರಿಗೆ ಆಸೆಗಳಿಲ್ಲವೇ? ಇದು ನಿಜಕ್ಕೂ ಖಂಡನಾರ್ಹವಾದುದಾಗಿದೆ. ಯೋಗೀಶ್‍ರವರು ತಮಗೆ ಪರಿಚಯವಿದ್ದು, ತಮ್ಮ ಅಂಗವೈಕಲ್ಯತೆ ಮೀರಿ ಬದುಕುತ್ತಿರುವ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. ಪ್ರವೇಶ ನಿರಾಕರಿಸಿದ್ದು ಅಮಾನವೀಯವಾಗಿದೆ' ಎಂದು ಪತ್ರಕರ್ತ ಶಿ.ಜು.ಪಾಶರವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.







