ಚಿನ್ನ ಪಡೆದು ಜುವೆಲ್ಲರಿ ಮಾಲಕನಿಗೆ ವಂಚನೆ-ಪ್ರಕರಣ ದಾಖಲು
ಪುತ್ತೂರು: ಚಿನ್ನಾಭರಣ ವ್ಯವಹಾರ ಅಭಿವೃದ್ಧಿಯಲ್ಲಿ ವ್ಯಕ್ತಿಯೊಬ್ಬರಿಗೆ ವಂಚನೆ ಮಾಡಿದ ಮತ್ತು ಜೀವ ಬೆದರಿಕೆಯೊಡ್ಡಿದ ಕುರಿತು ನ್ಯಾಯಾಲ ಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿನ ಹಿನ್ನಲೆಯಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪುತ್ತೂರಿನ ಕೋರ್ಟು ರಸ್ತೆಯಲ್ಲಿನ ಇಂಡಿಯನ್ ಆರ್ಕೇಡ್‍ನಲ್ಲಿ 'ಶ್ರೀ ಸಾಯಿ ಜ್ಯುವೆಲ್ಲರಿ' ಹೆಸರಿನ ಅಂಗಡಿಯನ್ನು ಹೊಂದಿರುವ ಮಿತ್ತಮಜಲು ನಿವಾಸಿ ದಿನೇಶ್ ಎನ್ ಅವರು ವಂಚನೆಗೊಳಗಾದವರು. ಪುತ್ತೂರು ನಗರದ ಹೊರವಲಯದ ಮಂಜಲ್ಪಡ್ಪು ನಿವಾಸಿ ಸುಧಾಕರ್ ಕೆ ಎಂಬವರು ವಂಚಿಸಿರುವ ವ್ಯಕ್ತಿ ಎಂದು ದೂರಲಾಗಿದೆ.
ಚಿನ್ನಾಭರಣ ವ್ಯಾಪಾರ ನಡೆಸುತ್ತಿದ್ದ ಪರಿಚಿತ ವ್ಯಕ್ತಿಯಾಗಿದ್ದ ಸುಧಾಕರ್ ಕೆ ಎಂಬವರು ಚಿನ್ನಾಭರಣ ವ್ಯವಹಾರ ಅಭಿವೃದ್ಧಿಗಾಗಿ ನನ್ನೊಂದಿಗೆ ಮಾತುಕತೆ ನಡೆಸಿ ತನ್ನಲ್ಲಿದ್ದ ಚಿನ್ನದ ಬ್ರೇಸ್ ಲೈಟ್, ಪತ್ನಿಯ ಬಳೆ ಮತ್ತು ಚೈನ್‍ಗಳು ಹಾಗೂ ತಾಯಿಯ 4 ಬಳೆಗಳು ಹಾಗೂ ಕಾಸ್ ತಾಳಿಯನ್ನು ಕರಗಿಸಿ 150 ಗ್ರಾಂ ತೂಕದ 916ಹಾಲ್ ಮಾರ್ಕ್‍ನ ಚಿನ್ನದ ಗಟ್ಟಿಯನ್ನು ಮಾಡಿ ಅಗ್ರಿಮೆಂಟ್ ಮಾಡಿಕೊಂಡು ಒಂದು ವರ್ಷದ ಅವಧಿಗೆ ಪಡೆದುಕೊಂಡಿದ್ದರು.ಆದರೆ ನಂತರದ ಬೆಳವಣಿಗೆಯಲ್ಲಿ ಸುಧಾಕರ್ ಅಗ್ರಿಮೆಂಟ್ ಶರ್ತದಂತೆ ನಡೆದುಕೊಳ್ಳದೆ ಚಿನ್ನವನ್ನು ಹಿಂತಿರುಗಿಸದೆ ಮತ್ತು ಲಾಭಂಶವನ್ನೂ ನೀಡದೆ ವಂಚಿಸಿ ಮೋಸ ಮಾಡಿದ್ದು, ಈ ಕುರಿತು ವಿಚಾರಿಸಿದಾಗ ನನಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿರುವುದಾಗಿ ದಿನೇಶ್ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಖಾಸಗಿ ದೂರಿನಲ್ಲಿ ಆರೋಪಿಸಿದ್ದರು. ಇದೀಗ ನ್ಯಾಯಾಲಯ ಸೂಚನೆಯಂತೆ ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.







