ಅಮೆರಿಕ ವಿರುದ್ಧ ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ
ಒಲಿಂಪಿಕ್ಸ್ ಅರ್ಹತಾ ಪಂದ್ಯ

ಭುವನೇಶ್ವರ, ನ. 1: ಅತ್ಯುತ್ತಮ ಪ್ರದರ್ಶನ ನೀಡಿದ ಭಾರತದ ಮಹಿಳಾ ಹಾಕಿ ತಂಡ ಶುಕ್ರವಾರ ಇಲ್ಲಿ ನಡೆದ ಒಲಿಂಪಿಕ್ಸ್‌ನ ಮೊದಲ ಹಂತದ ಅರ್ಹತಾ ಪಂದ್ಯದಲ್ಲಿ ಅಮೆರಿಕ ತಂಡವನ್ನು 5-1 ಅಂತರದ ಗೋಲುಗಳಿಂದ ಮಣಿಸಿತು. ಈ ಮೂಲಕ 2020ರ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳುವತ್ತ ದಿಟ್ಟ ಹೆಜ್ಜೆ ಇಟ್ಟಿತು.
ಎರಡು ಗೋಲು ಗಳಿಸಿದ ಗುರ್ಜಿತ್ ಕೌರ್ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದರು. ಭಾರತ ಎರಡನೇ ಕ್ವಾರ್ಟರ್‌ನ 29ನೇ ನಿಮಿಷದಲ್ಲಿ ಮೊದಲ ಗೋಲು ಗಳಿಸಿತು. ನೇಹಾ ನೆರವಿನಿಂದ ಲಿಲಿಮಾ ಮಿಂಝ್ ಭಾರತಕ್ಕೆ ಆರಂಭಿಕ ಮುನ್ನಡೆ ಒದಗಿಸಿಕೊಟ್ಟರು. ಮೊದಲಾರ್ಧದ ಅಂತ್ಯಕ್ಕೆ ಭಾರತದ 1-0 ಮುನ್ನಡೆ ಕಾಯ್ದುಕೊಂಡಿತು.
ದ್ವಿತೀಯಾರ್ಧದಲ್ಲಿ ನಾಲ್ಕು ಗೋಲುಗಳನ್ನು ಗಳಿಸಿದ ಭಾರತ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಶರ್ಮಿಳಾ ದೇವಿ(40ನೇ ನಿಮಿಷ), ಗುರ್ಜಿತ್ ಕೌರ್(42ನೇ ನಿಮಿಷ, 51ನೇ ನಿಮಿಷ)ಹಾಗೂ ನವನೀತ್ ಕೌರ್(46ನೇ ನಿಮಿಷ)ಗೋಲು ಗಳಿಸಿದರು. 54ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್‌ನಲ್ಲಿ ಅಮೆರಿಕದ ಎರಿನ್ ಮ್ಯಾಟ್ಸನ್ ಏಕೈಕ ಗೋಲು ಗಳಿಸಿ ತಂಡದ ಸೋಲಿನ ಅಂತರ ತಗ್ಗಿಸಿದರು. ಭಾರತ ಹಾಗೂ ಅಮೆರಿಕ ಶನಿವಾರ ಎರಡನೇ ಹಾಗೂ ಕೊನೆಯ ಪಂದ್ಯವನ್ನು ಆಡಲಿವೆ.





